Wednesday, February 21, 2024

ಜ.21ಕ್ಕೆ ಹುಕ್ಕೇರಿಮಠದ ಜಾತ್ರೆ, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಹೊಸದಿಗಂತ ವರದಿ ಹಾವೇರಿ:

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ನಗರದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಹುಕ್ಕೇರಿಮಠದ ಶಿವಬಸವ ಮಹಾಸ್ವಾಮಿಗಳ 78ನೇ ಹಾಗೂ ಶಿವಲಿಂಗ ಮಹಾಸ್ವಾಮಿಗಳ 15ನೇ ಪುಣ್ಯ ದಿನಾಚರಣೆಯ ಕಾರ್ಯಕ್ರಮಗಳು ಜ.16ರಿಂದ ಜ.20ರವರೆಗೆ ನಡೆಯಲಿವೆ. ಜ.21ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದೆ ಎಂದು ಹುಕ್ಕೇರಿಮಠದ ಪೀಠಾಧಿಪತಿ ಸದಾಶಿವ ಮಹಾಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿಮಠದ ಜಾತ್ರೆ ಎಂಬುದು ನಮ್ಮೂರ ಜಾತ್ರೆ ಎಂದೇ ಜನ ಜನಿತವಾಗಿದೆ. ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಕಾರ್ಯಕ್ರಮಗಳ ಜತೆಗೆ ಉಪನ್ಯಾಸ ಮತ್ತು ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಹಾಗೂ ಸಾಧಕರನ್ನು ಗೌರವಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳು ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಈ ಎಲ್ಲಾ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ನೇತೃತ್ವವನ್ನು ಶ್ರೀಮಠದ ಪೀಠಾಧಿಪತಿ ಸದಾಶಿವ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಜ.16ರಂದು ಬೆಳಗ್ಗೆ 8:30ಕ್ಕೆ ಷಟಸ್ಥಳ ಧ್ವಜಾರೋಹಣವನ್ನು ಅಕ್ಕಿಆಲೂರ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ನೆರವೇರಿಸುವರು. ಸಂಜೆ 6:30ಕ್ಕೆ ಶಿರ್ಶಿ ಬಣ್ಣದಮಠದ ಅಟವಿ ಶಿವಲಿಂಗ ಮಹಾಸ್ವಾಮಿಜಿ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ಜರುಗುವುದು. ಈ ವೇಳೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದುಮ ಕರುನಾಡ ಕಾಯಕ ಪ್ರಶಸ್ತಿ ಪುರಸ್ಕೃತ ರೇಖಾ ಅಂತಾಪುರ ಅವರನ್ನು ಸನ್ಮಾನಿಸಲಾಗುವುದು. ಶಿಗ್ಗಾವಿ ತಾಲೂಕಿಮ ಗೊಟಗೋಡಿಯ ಜಾನಪದ ವಿವಿ ತಂಡದಿಂದ ಜಾನಪದ ಸಂಭ್ರಮ ಹಾಗೂ ಯೋಗ ಪ್ರದರ್ಶನ ಜರುಗಲಿದೆ.

ಜ.೧೭ರಂದು ಶಿವಬಸವೇಶ್ವರ ಜಾನುವಾರು ಜಾತ್ರೆಯ ಉದ್ಘಾಟನೆ ಜರುಗಲಿದೆ. ಅರಬಾವಿ ದುರದುಂಡೇಶ್ವರ ಸಿದ್ಧಸಂಸ್ಥಾನಮಠದ ಗುರುಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಹಾವೇರಿ ಓಂ ಸಂಸ್ಥೆಯಿಂದ ನೀಡುವ ಸಾಧಕ ರತ್ನ ಪ್ರಶಸ್ತಿಯನ್ನು ರಾಣೆಬೆನ್ನೂರಿನ ಸಾಹಿತಿ ವೆಂಕಟೇಶ ಈಡಿಗರ ಅವರಿಗೆ ಪ್ರದಾನ ಮಾಡಲಾಗುವುದು. ಜ.18ರಂದು ತೋಂಟದಾರ್ಯ ಶಾಖಾಮಠ ಬೈಲೂರಿನ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೊತಬಾಳನ ಅರುಣೋದಯ ಕಲಾತಂಡದಿಂದ ಜಾನಪದ ವೈವಿಧ್ಯ ಕಾರ್ಯಕ್ರಮ ಜರುಗಲಿದೆ. ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ಮೂರು ದಿನಗಳ ಕಾಲ ಜರುಗಲಿದೆ.

ಜ.19ರಂದು ಚಿತ್ರದುರ್ಗದ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಾನಪದ ವಿದ್ವಾಂಸ ಶಂಭು ಬಳಿಗಾರ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಜ.20ರಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ.

ಜ.21ರಂದು ಬೆಳಗ್ಗೆ 8ಗಂಟೆಗೆ ಶಿವಬಸವ ಮಹಾಸ್ವಾಮಿಗಳ 78ನೇ ಹಾಗೂ ಶಿವಲಿಂಗ ಮಹಾಸ್ವಾಮಿಗಳ 15ನೇ ಪುಣ್ಯ ದಿನಾಚರಣೆಯ ಅಂಗವಾಗಿ ಉಭಯ ಶ್ರೀಗಳ ಗದ್ದುಗೆಗೆ ಮಹಾಪೂಜೆ, ಬಿಲ್ವಾರ್ಚನೆ, ಮಧ್ಯಾಹ್ನ 12ಕ್ಕೆ ಮಹಾಗಣಾರಾಧನೆ, ಅನ್ನಸಂತರ್ಪಣೆ, ಸಂಜೆ 4ಕ್ಕೆ ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.

ಜ.22ರಂದು ಸಂಜೆ 5:30ಕ್ಕೆ ಮಕ್ಕಳ ಜಾತ್ರೆ ಎಂಬ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಾಗೂ ರಾತ್ರಿ 8ಕ್ಕೆ ಭಕ್ತಿಪ್ರಧಾನವಾದ ಶಿರಹಟ್ಟಿಯ ಜಗದ್ಗುರು ಫಕ್ಕೀರೇಶ್ವರರ ಮಹಾತ್ಮೆ ಎಂಬ ನಾಟಕ ಜರುಗಲಿದೆ ಎಂದರು.

ಈ ವೇಳೆ ಪದಾಧಿಕಾರಿಗಳಾದ ಎಸ್.ಎಸ್. ಮುಷ್ಠಿ, ಆರ್.ಎಸ್. ಮಾಗನೂರ, ವಿಜಯಕುಮಾರ ಕೂಡ್ಲಪ್ಪನವರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ ಶಿವಲಿಂಗಪ್ಪ ಕಲ್ಯಾಣಿ, ವನಿತಾ ಮಾಗನೂರ, ಬಿ. ಬಸವರಾಜಪ್ಪ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!