ಲಕೋಟೆಯಲ್ಲಿ ಮಾನವ ಮೂಳೆ ಪತ್ತೆ: ಉಳ್ಳಾಲದ ಜನತೆಗೆ ‘ಭರ್ಜರಿ ಶಾಕ್’ ನೀಡಿದ ಮಹಿಳೆ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕೋಟೆಯೊಂದರಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪರಿಸರದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ಪತ್ತೆಯಾಗಿ ಜನತೆಯನ್ನು ಬೆಚ್ಚಿಬೀಳಿಸಿದ್ದು, ಇದರ ಹಿಂದಿನ ಅಸಲಿಯತ್ತು ಈಗ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇಷ್ಟಕ್ಕೂ ನಡೆದಿದ್ದೇನು?
ಶನಿವಾರ ನಡುರಾತ್ರಿ ಚಿತ್ರಾಂಜಲಿ ನಗರದ ಮನೆಯ ಆವರಣದ ಬಳಿ ಪ್ರಯೋಗಾಲಯದ ಮಾದರಿಯ ಅಸ್ಥಿಗಳು ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನ ವಶಕ್ಕೆ ಪಡೆದಿದ್ದರು.

ಮಹಿಳೆಯ ಎಡವಟ್ಟಿಗೆ ಬೇಸ್ತು ಬಿದ್ದ ಜನರು!
ಚಿತ್ರಾಂಜಲಿ ನಗರದಲ್ಲಿ ದೊರೆತ ಅಸ್ಥಿಗಳನ್ನ ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಬಳಿ ಎಸೆದಿರುವ ವಿಚಾರ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಹಿಳೆಯು ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದು , ನಿವೃತ್ತಿ ಹೊಂದಿದ್ದ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ಸಾಮಾಗ್ರಿಗಳನ್ನ ಮಹಿಳೆಯು ತಂದಿದ್ದರೆನ್ನಲಾಗಿದೆ. ವೈದ್ಯರ ಮನೆಯಿಂದ ತಂದಿದ್ದ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆಯನ್ನ ಮಹಿಳೆಯು ತನ್ನ ಮನೆಯ ಕಂಪೌಡ್ ಬಳಿ ಎಸೆದಿದ್ದರೆನ್ನಲಾಗಿದೆ.
ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವ ನಡೆದಿತ್ತು. ವಾರ್ಷಿಕೋತ್ಸವದ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟ್ಯೂಮ್ ಈ ಪ್ರದೇಶದಲ್ಲೇ ಕಳೆದು ಹೋಗಿತ್ತು. ನಿನ್ನೆ ರಾತ್ರಿ ಯುವಕನು ಕಾಸ್ಟ್ಯೂಮ್ ಹುಡುಕಲು ಬಂದಾಗ ಅಸ್ಥಿಗಳ ಲಕೋಟೆ ದೊರೆತಿದೆ. ಅಸ್ಥಿಗಳನ್ನ ಕಂಡು ಹೌಹಾರಿದ ಯುವಕ ಊರೆಲ್ಲಾ ಸುದ್ದಿ ಹಬ್ಬಿಸಿದ್ದು, ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

ಒಟ್ಟಾರೆ ಮಹಿಳೆ ಮಾಡಿದ ಎಡವಟ್ಟಿನಿಂದಾಗಿ ಊರವರು ಮತ್ತು ಪೊಲೀಸರು ಅಸ್ಥಿಗಳ ಬಗ್ಗೆ ನಾನಾ ರೀತಿಯ ‘ಹುಳ’ಗಳನ್ನ ತಲೆಗೆ ಬಿಟ್ಟು ರಾತ್ರಿ ನಿದ್ದೆಗೆಡುವಂತಾಗಿತ್ತು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!