ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಭಾರತ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು 3-1 ಅಂತರದಲ್ಲಿ ಕಳೆದುಕೊಂಡಿದ್ದು, ಜೊತೆಗೆ ಆಸ್ಟ್ರೇಲಿಯಾ ತಂಡ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಆರಂಭದಿಂದಲೂ ಭಾರತದ ಬ್ಯಾಟಿಂಗ್ ವೈಫಲ್ಯ ಇನ್ನಿಲ್ಲದಂತೆ ಕಾಡಿತು. ಈ ಹಿನ್ನೆಲೆಯಲ್ಲಿ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಕೇವಲ ಒಂದೇ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿತು. ಒಂದು ಮ್ಯಾಚ್ ಡ್ರಾ ಆದರೆ ಉಳಿದ 3 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವನ್ನು ಕಂಡಿತು. ಹೀಗಾಗಿ ಟೀಮ್ ಇಂಡಿಯಾ ಬರೋಬ್ಬರಿ 10 ವರ್ಷದ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಸಿಸ್ಗೆ ಬಿಟ್ಟುಕೊಟ್ಟು ಮುಖಭಂಗ ಅನುಭವಿಸಿತು.
ಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್ ಟ್ರೋಫಿ ಫೈನಲ್ ಹಾದಿಯನ್ನು ಆಸ್ಟ್ರೇಲಿಯಾ ಇನ್ನಷ್ಟು ಸುಲಭ ಮಾಡಿಕೊಂಡಿದೆ. ಭಾರತಕ್ಕೆ ಈ ಫೈನಲ್ ಕನಸು ಮರಿಚೀಕೆ ಎನ್ನಬಹುದು.
ಟೀಮ್ ಇಂಡಿಯಾದಲ್ಲಿ ಹಿರಿಯ ಆಟಗಾರರಾದ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಸರಿಯಾದ ಬ್ಯಾಟಿಂಗ್ ಮಾಡಲಿಲ್ಲ. ಪೆವಿಲಿಯನ್ನಿಂದ ಹೇಗೆ ಬರುತ್ತಿದ್ದರೋ ಹಾಗೇ ಔಟ್ ಆಗಿ ವಾಪಸ್ ತೆರಳುತ್ತಿದ್ದರು. ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ಒಂದು ಶತಕ ಬಾರಿಸಿದರೆ, ಉಳಿದ ಇನ್ನಿಂಗ್ಸ್ನಲ್ಲಿ 10ರನ್ ಗಡಿ ದಾಟಲು ತಿಣುಕಾಡಿದ್ದಾರೆ. ಇನ್ನು ರೋಹಿತ್ ಶರ್ಮಾ ಅಂತೂ ಅಟ್ಟರ್ ಫ್ಲಾಫ್ ಬ್ಯಾಟಿಂಗ್ ಮಾಡಿದರು.
ಕೊನೆಯ ಪಂದ್ಯದಲ್ಲಿ ಭಾರತ ನೀಡಿದ 162 ರನ್‌ಗಳನ್ನು ಕೇವಲ 27 ಓವರ್‌ಗಳಲ್ಲೇ ಆಸ್ಟ್ರೇಲಿಯಾ ಗುರಿ ಮುಟ್ಟಿತು. ಟ್ರಾವಿಸ್ ಹೆಡ್ (34) ಹಾಗೂ ಬ್ಯೂ ವೆಬ್‌ಸ್ಟರ್ (39) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.