October 21, 2026
Wednesday, October 21, 2026
spot_img

ಜೈಲರ್ 2 ಸಿನಿಮಾಗೆ ಕೆನಡಾದಲ್ಲಿ ವಿಘ್ನ: ತಾಂತ್ರಿಕ ಸಮಸ್ಯೆಯಿಂದ ಚಿತ್ರಪ್ರದರ್ಶನ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಜೋಡಿಯ ಮೆಗಾ ಹಿಟ್ ಸಿನಿಮಾ ‘ಜೈಲರ್ 2’ ಅಕ್ಟೋಬರ್ 15ರಂದು ತೆರೆಕಂಡು ವಿಶ್ವಾದ್ಯಂತ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ವಿಶ್ವಾದ್ಯಂತ 540 ಕೋಟಿ ರೂ.ಗಳಿಗೂ ಅಧಿಕ ಹಣ ಬಾಚಿಕೊಂಡಿರುವ ಈ ಚಿತ್ರಕ್ಕೆ, ಸದ್ಯ ಕೆನಡಾದಲ್ಲಿ ದೊಡ್ಡ ವಿಘ್ನ ಎದುರಾಗಿದೆ. ಕೆನಡಾದ ಪ್ರಮುಖ ಪ್ರದರ್ಶಕರಾದ ‘ಯೊರ್ಕ್‌ ಸಿನಿಮಾಸ್‌’, ಅನಿವಾರ್ಯ ಕಾರಣಗಳಿಂದ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ಯೊರ್ಕ್‌ ಸಿನಿಮಾಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಅಕ್ಟೋಬರ್ 21ರಿಂದ ಚಿತ್ರದ ಪ್ರದರ್ಶನವನ್ನು ನಿಲ್ಲಿಸುತ್ತಿರುವುದಾಗಿ ತಿಳಿಸಿದೆ. “ನಾವು ಎಲ್ಲಾ ಹಣಕಾಸಿನ ಬದ್ಧತೆಗಳನ್ನು ಮತ್ತು ಪಾವತಿಗಳನ್ನು ಪೂರ್ಣಗೊಳಿಸಿದ್ದೇವೆ. ಆದರೆ, ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಸನ್ ಪಿಕ್ಚರ್ಸ್’ ಅನುಮೋದನೆ ನೀಡದ ಕಾರಣ, ಉತ್ತರ ಅಮೆರಿಕಾದ ವಿತರಕರಾದ ‘ಶ್ಲೋಕಾ ಎಂಟರ್‌ಟೈನ್‌ಮೆಂಟ್ಸ್’ ಮತ್ತು ‘ಪ್ರತ್ಯಂಗಿರಾ ಸಿನಿಮಾಸ್’ ನಮಗೆ ಅಗತ್ಯವಿರುವ ಕೆಡಿಎಂ ಅಂದರೆ ಡಿಜಿಟಲ್ ಕೀ ನೀಡುತ್ತಿಲ್ಲ” ಎಂದು ಆರೋಪಿಸಿದೆ.

ಈ ತಾಂತ್ರಿಕ ಕೀ ಇಲ್ಲದೆ ಸಿನಿಮಾವನ್ನು ಪ್ರದರ್ಶಿಸಲು ಕಾನೂನುಬದ್ಧವಾಗಿ ಮತ್ತು ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಚಿತ್ರಮಂದಿರದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಥಿಯೇಟರ್ ಕಡೆಯಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತಾದರೂ, ನಿರ್ಮಾಪಕರು ಹಾಗೂ ವಿತರಕರ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಯಾರ್ಕ್ ಸಿನಿಮಸ್ ಬೇಸರ ವ್ಯಕ್ತಪಡಿಸಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಅಲ್ಲಿನ ರಜನಿಕಾಂತ್ ಅಭಿಮಾನಿಗಳಿಗೆ ಮತ್ತು ಸಿನಿಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ. ಸದ್ಯ ಈ ವಿವಾದದ ಕುರಿತು ‘ಜೈಲರ್ 2’ ಚಿತ್ರದ ನಿರ್ಮಾಪಕರು ಹಾಗೂ ವಿತರಕರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಬಾಕ್ಸ್‌ಆಫೀಸ್‌ನಲ್ಲಿ ಮುನ್ನುಗ್ಗುತ್ತಿರುವ ಸಿನಿಮಾಗೆ ವಿದೇಶದಲ್ಲಿ ಎದುರಾಗಿರುವ ಈ ಆಘಾತಕಾರಿ ಬೆಳವಣಿಗೆಯಿಂದ ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Must Read