ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ಮೂಲದ ವಿವಾಹಿತ ಯುವಕ ಬೇರೆ ಯುವತಿಯೊಂದಿಗೆ ಭಾನುವಾರ ಸುಳ್ಯದ ಗಾಂಧಿನಗರ ಲಾಡ್ಜೊಂದರಲ್ಲಿ ತಂಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಆ ಯುವಕನ ಪತ್ನಿ ಸುಳ್ಯಕ್ಕೆ ಬಂದು ಲಾಡ್ಜ್ ನ ಮುಂಭಾಗದ ರಸ್ತೆಯಲ್ಲಿ ನಿಂತು ಗಲಾಟೆ ಮಾಡಿದ ಘಟನೆ ನಡೆದಿದೆ.
ಲಾಡ್ಜ್ ನಲ್ಲಿ ಯುವತಿಯ ಜತೆಗಿದ್ದ ಆ ಯುವಕನ ಪತ್ನಿ ಲಾಡ್ಜ್‌ನ ಬಳಿಗೆ ಬರುತ್ತಿರುವುದನ್ನು ಗಮನಿಸಿದ ಯುವಕ ಆ ಯುವತಿಯ ಜತೆ ಲಾಡ್ಜ್ ನಿಂದ ಹೊರಗೆ ಬಂದಾಗ ಆತನ ಹೆಂಡತಿ ಅವರಿಬ್ಬರನ್ನು ತರಾಟೆಗೆತ್ತಿಕೊಳ್ಳತೊಡಗಿದರು. ಅವರನ್ನು ರಸ್ತೆಯಲ್ಲಿ ನಿಲ್ಲಿಸಿ ಆಕೆ ಬೊಬ್ಬೆ ಹಾಕುವುದನ್ನು ಕೇಳಿ ನೂರಾರು ಜನ ಜಮಾಯಿಸಿದರು. ಕೋಪಗೊಂಡಿದ್ದ ಆಕೆಯನ್ನು ಸಮಾಧಾನಪಡಿಸಲು ಯುವಕ ಪ್ರಯತ್ನಪಡುತ್ತಿದ್ದ ದೃಶ್ಯ ಕಂಡುಬಂದಿತ್ತು. ಆದರೆ ಆಕೆ ತನ್ನ ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ .