ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕೆ ಸತ್ತು ಹೋಗಿದ್ದಾಳೆ ಎಂದು ಅಂದುಕೊಂಡವರಿಗೆ ಆರು ವರ್ಷಗಳ ಶಾಕಿಂಗ್ ಘಟನೆ ಎದುರಾಗಿದೆ.
ರಾಜಸ್ಥಾನದಲ್ಲಿ ಆರತಿ ದೇವಿ ಎಂಬ ಮಹಿಳೆ ಸತ್ತು ಹೋಗಿದ್ದಳು ಎಂದು ಗಂಡ, ಮನೆಯವರಷ್ಟೇ ಅಲ್ಲ, ಪೊಲೀಸರು ಅಂದುಕೊಂಡಿದ್ದರು. ಆದರೆ ಆರು ವರ್ಷಗಳ ಬಳಿಕ ಎರಡನೇ ಗಂಡನ ಜತೆ ಮಹಿಳೆ ಪತ್ತೆಯಾಗಿದ್ದಾಳೆ.
2015ರಲ್ಲಿಈಕೆ ತನ್ನ ತಂದೆ ಸೂರಜ್ ಪ್ರಕಾಶ್ ಗುಪ್ತ ಜತೆ ರಾಜಸ್ಥಾನದ ದೌಸ ಜಿಲ್ಲೆಯ ಕರೌಲಿ ಗಡಿ ಪ್ರದೇಶದ ಮೆಹಂದಿಪುರ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಸೋನು ಸೈನಿ ಎಂಬವರನ್ನು ಭೇಟಿ ಆಗಿದ್ದರು. ಬಳಿಕ ಇವರಿಬ್ಬರೂ ತಂದೆಗೆ ತಿಳಿಸದೆ ಗುಟ್ಟಾಗಿ ಮದುವೆಯಾಗಿದ್ದರು. ಅದಾದ ಬಳಿಕ ಈಕೆ ವೃಂದಾವನದಲ್ಲಿನ ತನ್ನ ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದಳು.
ನಂತರ ಪೊಲೀಸರಿಗೆ ಒಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಸೂರಜ್ ಪ್ರಕಾಶ್ ಅದು ತಮ್ಮ ಮಗಳದೇ ಶವ ಎಂದು ಗುರುತು ಹಿಡಿದಿದ್ದಾಗಿ ಹೇಳಿದ್ದರು. ಮಾತ್ರವಲ್ಲ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆರತಿ ದೇವಿಯ ಕೊಲೆ ಆರೋಪದ ಮೇಲೆ ಸೋನು ಸೈನಿ ಹಾಗೂ ಆತನ ಸ್ನೇಹಿತ ಗೋಪಾಲ್ ಸೈನಿಯನ್ನು 2016ರಲ್ಲಿ ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಸೈನಿಗೆ 18 ತಿಂಗಳು ಜೈಲು ಹಾಗೂ ಗೋಪಾಲ್ ಸೈನಿಗೆ 9 ತಿಂಗಳು ಜೈಲು ಶಿಕ್ಷೆಯಾಗಿತ್ತು. ಅಲ್ಲದೆ, ಈ ಪ್ರಕರಣವನ್ನು ಭೇದಿಸಿ, ಇವರಿಬ್ಬರನ್ನು ಪತ್ತೆ ಮಾಡಿ ಬಂಧಿಸಿದ್ದ ಪೊಲೀಸರಿಗೆ 15 ಸಾವಿರ ನಗದು ಬಹುಮಾನ ಕೂಡ ನೀಡಲಾಗಿತ್ತು.
ಬಳಿಕ ಅವರಿಬ್ಬರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಹೀಗೆ ಜಾಮೀನಿನ ಮೇಲೆ ಬಿಡುಗಡೆಯಾದ ಆರು ವರ್ಷಗಳ ಬಳಿಕ ಇವರಿಬ್ಬರು ಆರತಿ ದೇವಿಯನ್ನು ಎರಡನೇ ಪತಿಯೊಂದಿಗೆ ಇರುವುದನ್ನು ಪತ್ತೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈಕೆಯ ಬಳಿ ಪ್ರತ್ಯೇಕ ಜನ್ಮದಿನಾಂಕ ಇರುವ ಎರಡು ಆಧಾರ್ ಕಾರ್ಡ್ಗಳು ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.