ಹಣದಾಸೆಗಾಗಿ ಪತ್ನಿಯಿಂದಲೇ ಪತಿಯ ಹತ್ಯೆ: ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ಸುಂಟಿಕೊಪ್ಪ ಸಮೀಪದ ಪನ್ಯ ಎಸ್ಟೇಟ್ ಬಳಿ ಇತ್ತೀಚೆಗೆ ಪತ್ತೆಯಾದ ಅರ್ಧಂಬರ್ಧ ಬೆಂದ ಪುರುಷನ ಮೃತದೇಹದ ಗುರುತು ಪತ್ತೆ ಮಾಡುವಲ್ಲಿ ಹಾಗೂ ಆತನ ಸಾವಿಗೆ ಕಾರಣರಾದ ಮೂವರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತನನ್ನು ಹೈದರಾಬಾದ್’ನ ರಮೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತನನ್ನು ಹತ್ಯೆ ಮಾಡಿರುವ ಆರೋಪದಡಿ ಆತನ ದ್ವಿತೀಯ ಪತ್ನಿ‌ ನಿಹಾರಿಕಾ(29), ಆಕೆಯ ಪ್ರಿಯಕರರೆನ್ನಲಾದ ನಿಖಿಲ್ ಮೈರೆಡ್ಡಿ (28l ಹಾಗೂ ಅಂಕುರ್ ರಾಣ (30) ಎಂಬವರುಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾದ ಮರ್ಸಿಡಿಸ್ ಬೆನ್ಝ್‌ ಕಾರು ಹಾಗೂ ಮೊಬೈಲ್’ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಅರ್ಧ ಸುಟ್ಟು ಕರಕಲಾಗಿದ್ದ ಮೃತದೇಹ ಯಾರದೆಂಬುದು ಗೊತ್ತಿಲ್ಲದೇ ಇದ್ದುದು ಪೊಲೀಸರಿಗೆ ಪತ್ತೆಕಾರ್ಯ ಒಂದು ಸವಾಲಾಗಿತ್ತು. ತಂಡವು ತಾಂತ್ರಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಸುಮಾರು 500 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡಿ ಆ ಮಾರ್ಗದಲ್ಲಿ ಸಂಚರಿಸಿರುವ ವಾಹನಗಳ ಪರಿಶೀಲನೆ, ಮೊಬೈಲ್ ಕರೆಗಳ ಜಾಡನ್ನು ಹಿಡಿದು ಸತತ 10 ದಿನಗಳವರೆಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿದೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಿ, ಕೊನೆಯದಾಗಿ ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಕಾರಿನ ಮಾಹಿತಿ ಆಧಾರದ ಮೇಲೆ ಮೃತನನ್ನು ಹೈದರಾಬಾದ್ ಮೂಲದ ರಮೇಶ್ ಕುಮಾರ್ (54) ಎಂದು ಗುರುತಿಸಲಾಗಿದೆ ಎಂದರು.

ಪ್ರಕರಣದ ವಿವರ: ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಅ.8ರಂದು ಅರ್ಧಂಬರ್ಧ ಬೆಂದಿರುವ ಗಂಡಸಿನ ಶವ ಪತ್ತೆಯಾಗಿತ್ತು. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಶವವನ್ನು ಕಂಡು ತೋಟದ ಮಾಲಕರಿಗೆ ತಿಳಿಸಿದ್ದು, ತೋಟದ ಮಾಲಕ ಸಂದೇಶ್ ಅವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃತ್ಯ ನಡೆದ ಸ್ಥಳಕ್ಕೆ ತಾನು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣದ ತನಿಖೆಗಾಗಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರು, ಸೋಮವಾರಪೇಟೆ ಠಾಣೆಯ ಇನ್ಸ್‌ಪೆಕ್ಟರ್, ಪಿಎಸ್ಐ, ಸುಂಟಿಕೊಪ್ಪ ಪೊಲೀಸ್ ಠಾಣೆ ಪಿಎಸ್ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಒಳಗೊಂಡ 16 ಜನರ ಒಟ್ಟು 4 ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ರಾಮರಾಜನ್ ವಿವರಿಸಿದರು.

ಹೈದರಾಬಾದ್ ಮೂಲದ ರಮೇಶ್ ಕುಮಾರ್, ಮೂಲತಃ ತೆಲಂಗಾಣ ರಾಜ್ಯದ ಯದಾದ್ರಿ ಜಿಲ್ಲೆಯ ಮೋಂಗಿ ನಗರದವಳಾಗಿದ್ದು, ಪ್ರಸಕ್ತ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿದ್ದ ಪಿ.ನಿಹಾರಿಕಾಳನ್ನು ವಿವಾಹವಾಗಿದ್ದು, ಎರಡನೇ ಪತ್ನಿಯಾಗಿದ್ದ ನಿಹಾರಿಕಾಳು ಆಸ್ತಿ ಮಾರಾಟದ 8ಕೋಟಿ ಹಣ ಪಡೆಯುವ ಉದ್ದೇಶದಿಂದ ತನ್ನ ಮತ್ತೋರ್ವ ಬಾಯ್’ಫ್ರೆಂಡ್ ಹರಿಯಾಣ ಮೂಲದ ಅಂಕುರ್ ರಾಣ ಎಂಬಾತನನ್ನು ಅ.1ರಂದು ಹೈದರಾಬಾದ್‌ಗೆ ಬರುವಂತೆ ತಿಳಿಸಿದ್ದಳು. ಅ.3ರಂದು ನಿಹಾರಿಕಾಳು ರಮೇಶ್ ಕುಮಾರ್‌ನನ್ನು ಬರುವಂತೆ ತಿಳಿಸಿ, ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ರಮೇಶ್ ಕುಮಾರ್‌ನ ಮರ್ಸಿಡಿಸ್ ಬೆನ್ಝ್‌ (ಟಿಎಸ್ 07 ಎಫ್ ಎಸ್ 5679) ಕಾರಿನಲ್ಲಿ ಹೊರಟು ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಅಂಕುರ್ ರಾಣಾನೊಂದಿಗೆ ಸೇರಿ ರಮೇಶ್‌ ಕುಮಾರ್‌ನನ್ನು ಕೊಲೆ ಮಾಡಿದ್ದಳು. ನಂತರ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಬಂದು ತನ್ನ ಬಾಯ್‌ಫ್ರೆಂಡ್ ನಿಖಿಲ್ ಬಳಿ ವಿಚಾರ ತಿಳಿಸಿ ಶವವನ್ನು ಯಾರಿಗೂ ಸಿಗದಂತೆ ನಾಶ ಮಾಡುವ ಉದ್ದೇಶದಿಂದ ಸುಂಟಿಕೊಪ್ಪ ಬಳಿ ಪನ್ಯ ಎಸ್ಟೇಟ್‌ಗೆ ತಂದು ಯಾರಿಗೂ ಗೊತ್ತಾಗದಂತೆ ಬೆಂಕಿ ಹಚ್ಚಿ ಕಾರಿನೊಂದಿಗೆ ತೆರಳಿದ್ದರು ಎಂದು ಕೆ.ರಾಮರಾಜನ್ ಮಾಹಿತಿ ನೀಡಿದರು.

ತನಿಖಾ ತಂಡವು ಪ್ರಕರಣವನ್ನು ಭೇದಿಸಿ ಅ.22ರಂದು ಮೊದಲಿಗೆ ನಿಹಾರಿಕಾ ಮತ್ತು ನಿಖಿಲ್‌ನನ್ನು ಬಂಧಿಸಿ ವಿಚಾರಣೆ ಮಾಡಿ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ವಿಶೇಷ ತನಿಖಾಧಿಕಾರಿಯಾಗಿ ಸೋಮವಾರಪೇಟೆ ಠಾಣೆಯ ಪೊಲೀಸ್‌ ನಿರೀಕ್ಷಕ ಮುದ್ದು ಮಾದೇವ ಅವರನ್ನು ನೇಮಿಸಿ, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಂಕುರ್ ರಾಣನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಯವರಾದ ರಂಜಿತ್, ಉದಯಕುಮಾರ್, ಸುದೀಶ್‌ ಕುಮಾರ್ ಅವರುಗಳು ಹರಿದ್ವಾರಕ್ಕೆ ತೆರಳಿ ಮಿಂಚಿನ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದುಕೊಂಡು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಇಡೀ ಪ್ರಕರಣವನ್ನು ಭೇದಿಸುವಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ರ ನಿರೀಕ್ಷಕ ಕೆ.ರಾಜೇಶ್ ಕೋಟ್ಯಾನ್, ಸೋಮವಾರಪೇಟೆ ಇನ್ಸ್‌ಪೆಕ್ಟರ್ ಮುದ್ದು ಮಾದೇವ, ಸುಂಟಿಕೊಪ್ಪ ಪಿಎಸ್ಐ ಚಂದ್ರಶೇಖರ್, ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್ಐಗಳಾದ ಮೋಹನ್‌ ರಾಜ್, ಭಾರತಿ.ಕೆ.ಹೆಚ್, ಸುಂಟಿಕೊಪ್ಪ ಠಾಣೆಯ ಎ.ಎಸ್ಐಗಳಾದ ತೀರ್ಥಕುಮಾರ್, ಹೆಚ್.ಪಿ.ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆ ಎಎಸ್ಐ ವಿ.ಜಿ.ವೆಂಕಟೇಶ್, ಶನಿವಾರಸಂತೆ ಠಾಣೆಯ ಹೆಚ್ ಸಿ ಉದಯಕುಮಾರ್.ಜಿ.ಆರ್., ಸುಂಟಿಕೊಪ್ಪ ಠಾಣೆಯ ಆಶಾ.ಎಸ್.ಡಿ, ಹೆಚ್‌, ಸೋಮವಾರಪೇಟೆ ಠಾಣೆಯ ಸುದೀಶ್ ಕುಮಾರ್.ಕೆ.ಎಸ್, ಕುಶಾಲನಗರ ಸಂಚಾರಿ ಠಾಣೆಯ ರಮೇಶ್.ಎನ್.ಆರ್.,ಕುಶಾಲನಗರ ಪಟ್ಟಣ ಠಾಣೆಯ ರಂಜಿತ್.ಜಿ.ಆರ್, ಬಾಬು.ಎಲ್, ಕುಶಾಲನಗರ ವೃತ್ತ ಕಚೇರಿಯ ಮಹೇಂದ್ರ.ಕೆ.ಎಸ್, ಸಂದೇಶ ಎಸ್.ಎನ್, ಸುಂಟಿಕೊಪ್ಪ ಠಾಣೆಯ ಜಗದೀಶ್.ಕೆ.ಆರ್,‌ ಪ್ರವೀಣ.ಎಸ್, ನಿಶಾಂತ್.ಎಸ್.ಪಿ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ರಾಜೇಶ್.ಸಿ.ಕೆ, ಪ್ರವೀಣ್.ಬಿ.ಕೆ. ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸುವುದಾಗಿ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!