ಹೊಸದಿಗಂತ ಮಡಿಕೇರಿ:
ಪತ್ನಿಯನ್ನು ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಬೇಟೋಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆ ಶಿಲ್ಪಾ ಸೀತಮ್ಮ (40) ಎಂಬವರೇ ಹತ್ಯೆಯಾದವರಾಗಿದ್ದು, ಆಕೆ ಪತಿ ಸಿ.ಬೋಪಣ್ಣ (43) ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ಪತಿ-ಪತ್ನಿ ನಡುವೆ ಬಹಳ ದಿನಗಳಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತೆನ್ನಲಾಗಿದ್ದು, ಶುಕ್ರವಾರ ರಾತ್ರಿ ಶಿಲ್ಪಾ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದನ್ನು ಬೋಪಣ್ಣ ಆಕ್ಷೇಪಿಸಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಜಗಳ ನಡೆದು ಶನಿವಾರ ಬೆಳಗ್ಗೆ ಬೋಪಣ್ಣ ತನ್ನ ಮನೆಯಲ್ಲಿದ್ದ ಎಸ್.ಬಿ.ಬಿ.ಎಲ್ ಬಂದೂಕಿನಿಂದ ಗುಂಡು ಹಾರಿಸಿ ಪತ್ನಿ ಶಿಲ್ಪಾರನ್ನು ಕೊಲೆ ಮಾಡಿರುವುದಾಗಿ ಹೇಳಲಾಗಿದೆ.
ಘಟನೆಯ ಬಳಿಕ ಆರೋಪಿ ಬೋಪಣ್ಣ ಕೋವಿಯೊಂದಿಗೆ ವೀರಾಜಪೇಟೆ ಗ್ರಾಮಾಂತರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ.
ಆರೋಪಿ ಸಿ.ಬೋಪಣ್ಣ ತಾನು ಹೊಂದಿದ್ದ ಎಸ್.ಬಿ.ಬಿ.ಎಲ್ ಬಂದೂಕನ್ನು ದುರುಪಯೋಗಪಡಿಸಿರುವುದರಿಂದ ಹಾಗೂ ಇದ್ದಕ್ಕಿದ್ದಂತೆ ಪ್ರಚೋದನೆಗೊಂಡು ಆತ್ಮಹತ್ಯೆ ಅಥವಾ
ಕೊಲೆ ಮಾಡುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆ ಬಂದೂಕಿನ ಜಮ್ಮಾ
ವಿನಾಯಿತಿಯನ್ನು ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಯವರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಶಿಲ್ಪಾ ಸೀತಮ್ಮ 2012ರಿಂದ 2017ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.