ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋಸಾಫ್ಟ್ ಕ್ಲೌಡ್‌ನಲ್ಲಿ ಉಂಟಾದ ಸಮಸ್ಯೆ ಸಹಜ ಸ್ಥಿತಿಯತ್ತ ಮರಳಿದ್ದು, ಇದರಿಂದ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ವ್ಯವಸ್ಥೆಗಳು ಸಹಜ ಸ್ಥಿತಿಗೆ ಮರಳಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಹೇಳಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಬೆಳಗ್ಗೆ 3 ಗಂಟೆಯಿಂದ ವಿಮಾನ ನಿಲ್ದಾಣಗಳಲ್ಲಿ ಏರ್‌ಲೈನ್ ವ್ಯವಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈಗ ವಿಮಾನ ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ. ಶುಕ್ರವಾರ ಅಡಚಣೆಗಳಿಂದ ಉಂಟಾದ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದೆ.
ಈ ನಡುವೆ ಬಯೋಮೆಟ್ರಿಕ್ ಆಧಾರಿತ ಬೋರ್ಡಿಂಗ್ ವ್ಯವಸ್ಥೆಯಾದ ಡಿಜಿ ಯಾತ್ರಾ ವ್ಯವಸ್ಥೆಯು ಕಾರ್ಯನಿರ್ವಹಿಸದ ಕಾರಣ ದೆಹಲಿಯ ಐಜಿಐ ವಿಮಾನ ನಿಲ್ದಾಣವು ಶನಿವಾರ ಬೆಳಗ್ಗೆ ಗಮನಾರ್ಹ ಅಡಚಣೆಗಳನ್ನು ಎದುರಿಸಿತು. ಪ್ರಯಾಣಿಕರು ಮ್ಯಾನುವಲ್ ಚೆಕ್ ಇನ್ ಮಾಡಲು ಪ್ರಯಾಸಪಡುತ್ತಿದ್ದರಿಂದ ನಿರ್ಗಮನ ಟರ್ಮಿನಲ್‌ಗಳಲ್ಲಿ ದೊಡ್ಡ ಸರತಿ ಸಾಲುಗಳು ಏರ್ಪಟ್ಟಿತು.