ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೋರ್ವರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಸಬ್ಬತ್ತಿ ಕ್ರಾಸ್ ನಿವಾಸಿ ನಂದಿನಿ ಲೋಕೇಶ ನಾಯ್ಕ (30) ಕೊಲೆಯಾದ ಮಹಿಳೆಯಾಗಿದ್ದು,
ಈಕೆಯನ್ನು ಪತಿ ಲೋಕೇಶ್ ಎಂಬಾತ ಹತ್ಯೆ ನಡೆಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮಹಿಳೆ ಬರ್ಬರವಾಗಿ ಕೊಲೆಯಾಗಿರುವ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದ್ದು, ಆಕೆಯ ಪತಿಯೇ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ಪತಿ ನಾಪತ್ತೆಯಾಗಿರುವುದು ಸ್ಥಳೀಯರ ಅನುಮಾನವನ್ನು ಇನ್ನಷ್ಟು ಬಲಗೊಳಿಸಿತ್ತು. ಇದೀಗ ಆರೋಪಿ ಲೋಕೇಶನನ್ನು ಪೊಲೀಸರು ಭಟ್ಕಳದ ಹೊಟೇಲ್ ಒಂದರಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮುರುಡೇಶ್ವರ ಠಾಣೆ ಪೊಲೀಸರು ತನಿಖೆ ಅರಂಭಿಸಿದ್ದಾರೆ.
ಸಬ್ಬತ್ತಿ ಕ್ರಾಸ್ ನಲ್ಲಿ ಇಬ್ಬರು ಪುಟ್ಟ ಮಕ್ಕಳೊಂದಿಗೆ ಈ ದಂಪತಿ ವಾಸವಾಗಿದ್ದು, ಇದೀಗ ತಾಯಿ ಕೊಲೆಗೀಡಾಗಿ, ತಂದೆ ಬಂಧನವಾಗಿರುವ ಹಿನ್ನೆಲೆಯಲ್ಲಿ ಪುಟ್ಟ ಮಕ್ಕಳು ದಿಕ್ಕುತೋಚದಂತಾಗಿವೆ.