Thursday, December 18, 2025

ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಮಕ್ಕಳನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಗಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬುರ್ಖಾ ಧರಿಸದೆ ಹೊರಗೆ ಹೋಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಫಾರೂಕ್ ಎಂಬ ವ್ಯಕ್ತಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ಶವಗಳನ್ನು ಅಂಗಳದಲ್ಲಿ ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಹೂತು ಕಾಂಕ್ರೀಟ್‌ನಿಂದ ಮುಚ್ಚಿದ್ದಾನೆ.

ಫಾರೂಕ್‍ನ ಪತ್ನಿ ತಾಹಿರಾ ಮತ್ತು ಪುತ್ರಿಯರಾದ ಅಫ್ರೀನ್ ಮತ್ತು ಸಹ್ರೀನ್ ಐದು ದಿನಗಳಿಂದ ನಾಪತ್ತೆಯಾದ ಕಾರಣ ಫಾರೂಕ್ ತಂದೆ ದಾವೂದ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಯ ಸಮಯದಲ್ಲಿ, ಫಾರೂಕ್ ಹೇಳಿಕೆಗಳಲ್ಲಿ ವ್ಯತ್ಯಾಸವನ್ನು ಗಮನಿಸಿದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.

ಫಾರೂಕ್ ತನ್ನ ಹೆಂಡತಿ ಮತ್ತು ಹಿರಿಯ ಮಗಳನ್ನು ಗುಂಡು ಹಾರಿಸಿ ಹಾಗೂ ಕಿರಿಯ ಮಗಳನ್ನು ಕತ್ತು ಹಿಸುಕಿ ಕೊಂದು, ಅಂಗಳದಲ್ಲಿ ಶೌಚಾಲಯಕ್ಕಾಗಿ ಅಗೆದ ಗುಂಡಿಯಲ್ಲಿ ಅವರ ಶವಗಳನ್ನು ಹೂತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಆತನ ಮನೆಗೆ ಧಾವಿಸಿದ ಪೊಲೀಸರು, ಶವಗಳನ್ನು ಹಾಕಿದ ಗುಂಡಿಯನ್ನು ಅಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

error: Content is protected !!