ಹೊಸದಿಗಂತ ವರದಿ, ವಿಜಯನಗರ:
ಪ್ರೀತಿ, ಪ್ರೇಮದ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದ ದುರುಳನೊಬ್ಬ, ಸ್ನೇಹಿತರೊಂದಿಗೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಮಣ್ಣು ಮಾಡಿರುವ ಘಟನೆ ಹೊಸಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನಗರದ ನೇಕಾರ ಕಾಲೋನಿ ನಿವಾಸಿ ಮಂಜುನಾಥ ಅಲಿಯಾಸ್ ಡಾಲಿ(೨೪) ಎಂಬಾತ ಚಪ್ಪರದಹಳ್ಳಿಯ ೧೭ ವರ್ಷದ ಬಾಲಕಿಯನ್ನು ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಯಾವುದೋ ಕಾರಣದಿಂದ ಪತಿ- ಪತ್ನಿ ಮಧ್ಯೆ ಗಲಾಟೆಯಾಗಿದ್ದು, ಈ ವೇಳೆ ಉಸಿರುಗಟ್ಟಿ ಕೊಲೆ ಮಾಡಿದ್ದಾನೆ. ಅದನ್ನು ಮರೆ ಮಾಚಲು ಸ್ನೇಹಿತರಾದ ತರುಣ್‌ಹಾಗೂ ಅಕ್ಬರ್ ನೆರವಿನೊಂದಿಗೆ ಮುನಿರಾಬಾದ್ ಸಮೀಪದ ತುಂಗಭದ್ರಾ ನದಿ ಸಮೀಪ ಗುಂಡಿ ತೆಗೆದು, ಮುಚ್ಚಿಹಾಕಿದ್ದಾರೆ. ಅಲ್ಲದೇ, ಬಾಲಕಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಹುಡುಗನ ತಾಯಿ ಲಕ್ಷ್ಮೀ, ಮಂಜುನಾಥ, ತರುಣ್ ಹಾಗೂ ಅಕ್ಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದೇಗೆ?
ಬಾಲಕಿ ಕೊಲೆಯಾಗಿ ಸುಮಾರು ಎರಡು ತಿಂಗಳು ಗತಿಸಿರೂ, ಎಲ್ಲೂ ಬಹಿರಂಗವಾಗದಿದ್ದರಿoದ ಆರೋಪಿಗಳು ನಿರಾಳರಾಗಿದ್ದರು. ಆದರೆ, ಆರೋಪಿಗಳಲ್ಲೊಬ್ಬನಿಗೆ ಘಟನೆ ಮುಚ್ಚಿಹಾಕುತ್ತಿರುವುದಕ್ಕೆ ಪಾಪ ಪ್ರಜ್ಞೆ ಕಾಡುತ್ತಿತ್ತು. ಅದನ್ನು ತಡೆಯಲಾಗದೇ, ಆರೋಪಿ ಬಾಲಕಿಯ ತಂದೆ ಬಳಿ ಬಾಲಕಿ ಸಾವಿನ ವಿಚಾರವನ್ನು ಹಂಚಿಕೊoಡಿದ್ದ. ಈ ಹಿನ್ನೆಲೆಯಲ್ಲಿ ಬಾಲಕಿ ತಂದೆ ಯಲ್ಲಪ್ಪ ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಪಿಅರುಣಾಂಕ್ಷು ಗಿರಿ ಮಾರ್ಗದರ್ಶಣದಲ್ಲಿ ಆರೋಪಿಗಳನ್ನು ಸ್ಥಳಕ್ಕೆ ಶವ ತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ತನಿಖೆಯಲ್ಲಿದ್ದು, ಇನ್ನಷ್ಟೇ ಸತ್ಯಾಂಶ ಗೊತ್ತಾಗಬೇಕು ಎಂದು ಎಸ್ಪಿ ಅರುಣಾಂಕ್ಷು ಗಿರಿ ಮಾಹಿತಿ ನೀಡಿದರು.