July 8, 2026
Wednesday, July 8, 2026
spot_img

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿ: ವಿಷ ಬೆರೆಸಿದ ಜೀರಾ ಸೋಡಾ ಕುಡಿಸಿ ಬಳಿಕ ಕುತ್ತಿಗೆ ಹಿಸುಕಿ ಕೊಂ*ದ ಪತಿ

ಹೊಸದಿಗಂತ ವರದಿ ಬೆಳಗಾವಿ:

ಅನೈತಿಕ ಸಂಬಂಧಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸುತ್ತಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಅತ್ಯಂತ ಅಮಾನವೀಯವಾಗಿ ಆಕೆಯನ್ನು ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶೀತಲಿಬಾವಿ ಸಮೀಪ ಬೆಳಕಿಗೆ ಬಂದಿದೆ. ಜೀರಾ ಸೋಡಾದಲ್ಲಿ ವಿಷ ಮತ್ತು ಗಾಜಿನ ಪುಡಿ ಬೆರೆಸಿ ಕುಡಿಸಿದ ಬಳಿಕ ಕುತ್ತಿಗೆ ಹಿಸುಕಿ ಕೊಲೆಗೈದು, ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಪಘಾತದ ನಾಟಕವಾಡಿದ ಆರೋಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ನೀಡಿದ ಮಾಹಿತಿಯಂತೆ, ಗೋಕಾಕ್ ತಾಲೂಕಿನ ಘಟಪ್ರಭಾ ಶಿಂಧಿಕುರಬೇಟ ಗ್ರಾಮದ ಸಂತೋಷ್ ರೇವಪ್ಪ ಪಟಾಯಿತ್ (33) ಬಂಧಿತ ಆರೋಪಿ. ಮೃತಪಟ್ಟ ಮಹಿಳೆ ಆತನ ಪತ್ನಿ ಸಾವಕ್ಕಾ ಪಟಾಯಿತ್ (32) ಎಂದು ಗುರುತಿಸಲಾಗಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ

ಪ್ರಾಥಮಿಕ ತನಿಖೆಯಲ್ಲಿ ಸಂತೋಷ್‌ಗೆ ವಿವಾಹೇತರ ಸಂಬಂಧವಿದ್ದು, ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸುತ್ತಿದ್ದಳು ಎಂಬುದು ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಹಲವು ದಿನಗಳಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪತ್ನಿಯನ್ನು ದಾರಿ ತಪ್ಪಿಸುವ ಉದ್ದೇಶದಿಂದ ಆರೋಪಿ ಮುಂಚಿತವಾಗಿಯೇ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 12ರಂದು ಮರಕುಂಬಿ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವ ವೇಳೆ ಮುರಗೋಡ ಪಟ್ಟಣದಲ್ಲಿ ಖರೀದಿಸಿದ್ದ ಜೀರಾ ಸೋಡಾದಲ್ಲಿ ಇಲಿ ಪಾಷಾಣ ಮತ್ತು ಗಾಜಿನ ಪುಡಿಯನ್ನು ಬೆರೆಸಿ ಪತ್ನಿಗೆ ಕುಡಿಸಿದ್ದಾನೆ. ಬಳಿಕ ಶೀತಲಿಬಾವಿ ಸಮೀಪ ತಲುಪಿದಾಗ ಅಸ್ವಸ್ಥಗೊಂಡಿದ್ದ ಪತ್ನಿಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ವೈದ್ಯರ ಅನುಮಾನದಿಂದ ಬಯಲಾಯ್ತು ಕೊಲೆ ರಹಸ್ಯ

ಕೊಲೆ ಬಳಿಕ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ ಎಂದು ಗೋಕಾಕ್ ಗ್ರಾಮೀಣ ಠಾಣೆಗೆ ಕರೆ ಮಾಡಿ ಆರೋಪಿ ಮಾಹಿತಿ ನೀಡಿದ್ದ. ಆದರೆ ಮೃತದೇಹದ ಮೇಲಿನ ಗಾಯಗಳ ಸ್ವರೂಪ ಹಾಗೂ ಆರೋಪಿಗೆ ಗಂಭೀರ ಗಾಯಗಳಿಲ್ಲದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು.

ಕಠಿಣ ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ಜಿಲ್ಲೆಯ ಜನರಲ್ಲಿ ತೀವ್ರ ಆಘಾತ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !