ಹೊಸದಿಗಂತ ವರದಿ, ಬಳ್ಳಾರಿ:
ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಲಾಗಿದ್ದು, ಮಂಗಳವಾರ ಅನೇಕ ಘಟನೆಗಳಿಗೆ ಸಾಕ್ಷಿಯಾಯಿತು. ನಿಗದಿಯಂತೆ ಮೇಯರ್ ಚುನಾವಣೆ ಹಿನ್ನೆಲೆ ಅಧಿಕಾರಿಗಳು ಪಾಲಿಕೆ ಸದಸ್ಯರಿಗೆ 15 ದಿನಗಳ ಮುಂಚೆಯೇ ನೋಟೀಸ್ ಜಾರಿ ಮಾಡಿದ್ದರು, ಅದರಂತೆ ಸದಸ್ಯರು ನಿಗದಿತ ಸಮಯಕ್ಕೆ ಹಾಜರಾಗಿದ್ದರು.
ಬಿಜೆಪಿ ಸದಸ್ಯ ಗುಡಿಗಂಟೆ ಹನುಮಂತ, ಕಾಂಗ್ರೆಸ್ ನ ಶ್ವೇತಾ ಸೋಮಶೇಖರ್, ಕುಬೇರಾ ಹಾಗೂ ಪಕ್ಷೇತರ ಸದಸ್ಯ ಶ್ರೀನಿವಾಸ್ ಮಿಂಚು ಅವರು ನಿಗಧಿತ ಅವಧಿಯೊಳಗೆ ನಾಮಪತ್ರ ಸಲ್ಲಿಸಿದ್ದರು. ಅಧಿಕಾರಿಗಳು ಪ್ರಾದೇಶಿಕ ಆಯುಕ್ತ ಕೃಷ್ಣ ಬಜಪೆ ಅವರು ಬಂದಿಲ್ಲ, ಅವರು ಬರಬೇಕು ಎಂದು ಸುಮಾರು 1.30ರ ವರೆಗೆ ಕಾಲಹರಣ ಮಾಡಿದರು.
ಈ ವೇಳೆ ಆಕ್ರೋಶ ಗೊಂಡ ಬಿಜೆಪಿ ಪಾಲಿಕೆ ಸದಸ್ಯರು ಕೂಡಲೇ ನಿಯಮದಂತೆ ಚುನಾವಣೆ ನಡೆಸಿ, ಪ್ರಾದೇಶಿಕ ಆಯುಕ್ತರು ಬಾರದಿದ್ದರೇ ಅವರ ಪರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆಸಿ ಎಂದು ಪಟ್ಟುಹಿಡಿದರು. ಆದರೂ ಅಧಿಕಾರಿಗಳು ನಾನಾ ನೆಪ ಹೇಳುವ ಮೂಲಕ ಸದಸ್ಯರನ್ನು ಸಮಾಧಾನ ಪಡಿಸಲು ಮುಂದಾದರು. ಆದರೂ, ಫಲ ನೀಡಲಿಲ್ಲ.
ಅಧಿಕಾರಿಗಳೊಂದಿಗೆ ವಾಗ್ವಾದ
ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಾದ ಗುಡಿಗಂಟೆ ಹನುಮಂತ, ಹನುಮಂತ, ಮೋತ್ಕರ್ ಶ್ರೀನಿವಾಸ್, ಇಬ್ರಾಹಿಂ ಬಾಬು, ಚೇತನಾ ವೇಮಣ್ಣ, ಸುರೇಖಾ ಮಲ್ಲನಗೌಡ ಸೇರಿದಂತೆ ವಿವಿಧ ಸದಸ್ಯರು ಹಾಗೂ ಅಧಿಕಾರಿಗಳ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು.
ನಿಗದಿಯಂತೆ ಮೇಯರ್ ಚುನಾವಣೆ ನಡೆಸಬೇಕು, ಪ್ರಾದೇಶಿಕ ಆಯುಕ್ತರು ಗೈರು ಎಂದು ಚುನಾವಣೆ ಮುಂದೂಡುವುದು ಸರಿಯಲ್ಲ, ಇದು ಸಂವಿಧಾನ ವಿರೋಧಿ ಕ್ರಮವಾಗಿದೆ. ನಿಗದಿತ ಸಮಯಕ್ಕೆ ಸದಸ್ಯರು ಹಾಜರಾಗಿದ್ದರೂ ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ರಿಪಬ್ಲಿಕ್ ಬಳ್ಳಾರಿ ಎಂದು ಈ ಹಿಂದೆ ನಮಗೆ ಅಂತಿದ್ದರು, ಅದನ್ನು ಮಾಡುತ್ತಿರುವುದು ಕಾಂಗ್ರೆಸ್, ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ಅವರಿಗೆ ನಾವು ಬೆಂಬಲಿಸಿದರೇ ಕಾಂಗ್ರೆಸ್ ಗೆ ಮುಖಭಂಗವಾಗಲಿದೆ ಎಂದು ಉದ್ದೇಶಪೂರ್ವಕವಾಗಿ ಮೇಯರ್ ಚುನಾವಣೆಯನ್ನು ಮುಂದೂಡಲಾಗುತ್ತಿದೆ, ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್ ರಂತೆ ವರ್ತಿಸುವುದನ್ನು ಬಿಟ್ಟು, ನಿಯಮದಂತೆ ಚುನಾವಣೆ ನಡೆಸಬೇಕು ಎಂದು ಸದಸ್ಯರು ಪಟ್ಟುಹಿಡಿದರು. ಅಧಿಕಾರಿಗಳು ಎಷ್ಟೇ ಸಮಾಧಾನ ಪಡಿಸಲು ಮುಂದಾದರೂ ಫಲ ನೀಡಲಿಲ್ಲ.