ನಾನು ಕೂಡ ಯಮುನಾ ನದಿ ನೀರನ್ನೇ ಕುಡಿಯುತ್ತೇನೆ: ಕೇಜ್ರಿವಾಲ್ ಆರೋಪಕ್ಕೆ ತಿರುಗೇಟು ಕೊಟ್ಟ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ಇಂದು ದೆಹಲಿಯ ಉಸ್ಮಾನ್‌ಪುರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಚುನಾವಣಾ ಪ್ರಚಾರ ರ್ಯಾಲಿ ನಡೆಸಿದರು. ಈ ವೇಳೆ ತಮ್ಮ ಭಾಷಣದ ಸಮಯದಲ್ಲಿ ಹರಿಯಾಣದ ಯಮುನಾ ನದಿಗೆ ವಿಷಪ್ರಾಶನ ಮಾಡುತ್ತಿದೆ ಎಂಬ ಆರೋಪಗಳ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಮೋದಿ ತರಾಟೆಗೆ ತೆಗೆದುಕೊಂಡರು.

ನಾವು ಕೂಡ ಯಮುನಾ ನದಿ ನೀರನ್ನೇ ಕುಡಿದಿದ್ದೇವೆ. ಕೇಜ್ರಿವಾಲ್ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

ಆರೋಪವೇನು?
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಪ್​ ಪಕ್ಷದ ರಾಷ್ಟೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಅವರು ಇತಿಹಾಸದಲ್ಲಿ ಎಂದಿಗೂ ಮಾಡದ ಕೆಲಸವನ್ನು ಬಿಜೆಪಿ ಮಾಡಿದೆ, ನೆರೆಯ ಹರಿಯಾಣದಲ್ಲಿ ಅಧಿಕಾರದಲ್ಲಿರುವ ಕೇಸರಿ ಪಕ್ಷವು ಆ ರಾಜ್ಯದಲ್ಲಿ ಮತ್ತು ರಾಷ್ಟ್ರ ರಾಜಧಾನಿಗೆ ಹರಿಯುವ ಯಮುನಾ ನದಿಗೆ ವಿಷಕಾರಿ ವಸ್ತುವನ್ನು ಸೇರಿಸಿದೆ ಎಂದು ಆರೋಪಿಸಿದ್ದರು.

ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದು, ‘ಯಮುನಾ ನದಿ ನೀರನ್ನು ದೇಶದ ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ದೆಹಲಿಯಲ್ಲಿರುವ ಎಲ್ಲ ರಾಜತಾಂತ್ರಿಕರು ಕುಡಿಯುತ್ತಾರೆ. ಅಂದಮೇಲೆ ನನಗೆ ಹರಿಯಾಣ ಜನರು ವಿಷ ಬೇರಸುತ್ತಾರೆ ಎನ್ನುವುದನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ. ಹರಿಯಾಣ ಬಿಜೆಪಿ ಸರ್ಕಾರ ಪ್ರಧಾನಿಗೆ ವಿಷದ ನೀರು ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಹರಿಯಾಣದ ಜನರು ದೆಹಲಿಯಲ್ಲಿರುವವರಿಗಿಂತ ಭಿನ್ನವೇ? ಹರಿಯಾಣದಲ್ಲಿ ವಾಸಿಸುವವರ ಸಂಬಂಧಿಕರು ದೆಹಲಿಯಲ್ಲಿ ವಾಸಿಸುತ್ತಿಲ್ಲವೇ? ಹರಿಯಾಣದ ಜನರು ತಮ್ಮ ಸ್ವಂತ ಜನರು ಕುಡಿಯುವ ನೀರನ್ನು ವಿಷಪೂರಿತಗೊಳಿಸಬಹುದೇ? ಹರಿಯಾಣ ಕಳುಹಿಸಿದ ನೀರನ್ನು ದೆಹಲಿಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಸೇವಿಸುತ್ತಾರೆ, ಅದರಲ್ಲಿ ಈ ಪ್ರಧಾನಿಯೂ ಇದ್ದಾರೆ. ಕುಡಿಯುವ ನೀರನ್ನು ಒದಗಿಸುವುದು ಒಳ್ಳೆಯ ಕೆಲಸವೆಂದು ಪರಿಗಣಿಸುವ ದೇಶ ನಮ್ಮದು. ಇಂತಹ ಮಾತುಗಳನ್ನಾಡುವ ಜನರಿಗೆ ದೆಹಲಿಯ ಜನರು ತಕ್ಕ ಪಾಠ ಕಲಿಸುತ್ತಾರೆ ಎನ್ನುವ ಖಾತ್ರಿ ನನಗಿದೆ ಎಂದು ಅವರು ಹೇಳಿದರು.

ನೀವು ಕಾಂಗ್ರೆಸ್ ಪಕ್ಷದ 15 ವರ್ಷಗಳ ಆಡಳಿತ ಹಾಗೂ ಆಮ್ ಆದ್ಮಿ ಪಕ್ಷದ 11 ವರ್ಷಗಳ ಆಡಳಿತವನ್ನು ನೋಡಿದ್ದೀರಿ, ಆದರೆ ದೆಹಲಿ ಎದುರಿಸುತ್ತಿರುವ ಸಮಸ್ಯೆಗಳು ಹಾಗೆಯೇ ಉಳಿದಿವೆ. 25 ವರ್ಷಗಳಲ್ಲಿ ಅವರು (ಕಾಂಗ್ರೆಸ್ ಮತ್ತು ಎಎಪಿ) ನಿಮ್ಮ ಎರಡು ತಲೆಮಾರುಗಳನ್ನು ನಾಶಪಡಿಸಿದ್ದಾರೆ. ದೆಹಲಿಯಲ್ಲಿ ಇನ್ನೂ ಟ್ರಾಫಿಕ್ ಜಾಮ್, ನೀರು ನಿಲ್ಲುವುದು ಮತ್ತು ಮಾಲಿನ್ಯವಿದೆ ಎಂದರು. ಇದೇ ವೇಳೆ ಆಪ್​ ಕಳೆದ ಎರಡು ಚುನಾವಣೆಯಲ್ಲಿ ಯಮುನಾ ನದಿಯ ಹೆಸರಿನಲ್ಲಿ ಮತ ಕೇಳಿದೆ. ಆದರೆ ಈಗ ಯಮುನಾ ಮತ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೂರು ವರ್ಷಗಳಲ್ಲಿ ಯಮುನಾ ಸ್ವಚ್ಚಗೊಳಿಸುವ ಭರವಸೆ ವ್ಯಕ್ತಪಡಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!