March 22, 2026
Sunday, March 22, 2026
spot_img

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸ ಹಿಂಸೆಯನ್ನಲ್ಲ. ಕಾಂಗ್ರೆಸ್‌ ಕಂಸನಲ್ಲಿ ನಂಬಿಕೆ ಇಟ್ಟಿದೆ…ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಭಗವದ್ಗೀತೆ ಜಗದ ಬೆಳಕು, ಅರಿವು. ಸನ್ಮಾರ್ಗದ ದೀವಿಗೆ. ಆದರ್ಶಗಳ ಮಹಾಸಾರ. ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೆಯ ಮಾರ್ಗದಲ್ಲಿ ನಡೆಸುವ ಸದುದ್ದೇಶದಿಂದ ನಾನು ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ ಎಂದು ತಿಳಿಸಿದರು.

ಬಹುಶಃ, ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು?.ನಾನೂ ಸೇರಿ ಜನಪ್ರತಿನಿಧಿಗಳೆಲ್ಲರೂ ಪ್ರಮಾಣ ಸ್ವೀಕರಿಸುವುದು ಸಂವಿಧಾನಬದ್ಧವಾಗಿಯೇ. ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ ‘ಮಾರ್ಗ’ ಯಾವುದು? ಕಂಸ ಮಾರ್ಗವೇ? ಎಂದು ಪ್ರಶ್ನಿಸಿದ್ದಾರೆ.

ಮಹದೇವಪ್ಪನವರೇ, ನಿಮಗೆ ತಿಳಿದಿರಲಿ. ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ. ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ. ಕೊನೆಗೆ, ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ. ಹೇಳುವುದೂ ಇಲ್ಲ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !