ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಿ.ಟಿ.ರವಿ ಅವರಿಗೆ ಟ್ರೀಟ್ಮೆಂಟ್‌ನ ಅಗತ್ಯವಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು, ಇದಕ್ಕೆ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಾನು ಸಂಘದ ಸ್ವಯಂ ಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ ಆಗಿದ್ದು, ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತಾ ನನಗೆ ಭಯ. ಅದಕ್ಕಾಗಿ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ದೇಶದ ಶ್ರೀಮಂತ ಶಾಸಕ. ಅಲ್ಲದೆ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಖಾತೆ ಎಲ್ಲಾ ಇದೆ ಎಂದರು.
ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ. ಅಧಿಕಾರ ಮದ ನಿರ್ಮಾಣ ಮಾಡುತ್ತದೆ. ಬಹುಶಃ, ಅಧಿಕಾರದ ಅಹಂ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬಹುದು. ಅದೇ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತನಾಗಿದ್ದು, ನನ್ನ ಟಾರ್ಗೆಟ್ ಮಾಡಿ ಸಿಎಂ ಆಗುವುದಕ್ಕೆ ಆಗಲ್ಲ. ನೀವು ಸಿಎಂ ಆಗುವುದಕ್ಕೆ ಬೇರೆಯವರನ್ನು ಟಾರ್ಗೆಟ್ ಮಾಡಬೇಕು ಎಂದು ವ್ಯಂಗ್ಯವಾಡಿದರು.