Thursday, June 1, 2023

Latest Posts

ಜೆಡಿಎಸ್‌ನವರ ರಾಜಕೀಯ ಷಡ್ಯಂತ್ರದಿಂದ ನನಗೆ ಸೋಲು: ಡಾ.ಕೆ.ಸುಧಾಕರ್‌

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ಮತದಾನಕ್ಕೆ 12 ಗಂಟೆ ಬಾಕಿ ಇರುವಾಗಿ ಜೆಡಿಎಸ್‌ನವರು ಮಾಡಿದ ರಾಜಕೀಯ ಷಡ್ಯಂತ್ರದಿಂದ ನನ್ನ ಸೋಲಾಗಿದೆ. ಕ್ಷೇತ್ರದ ಮತದಾರರು ಹಾಗೂ ರೈತರು ಯಾವುದೇ ಕಾರಣಕ್ಕೆ ಮಾಜಿ ಶಾಸಕ ಬಚ್ಚೇಗೌಡರ ಈ ಕೆಲಸವನ್ನು ಕ್ಷಮಿಸಲ್ಲ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಜೆಡಿಎಸ್‌ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷದವರು ಉದ್ದೇಶಪೂರ್ವಕವಾಗಿ ರಾಜಕೀಯ ಹುನ್ನಾರ ಮಾಡಿ ಕಾಂಗ್ರೆಸ್‌ಗೆ ಮತ ಕೊಡಿಸಿದ್ದಾರೆ. ವದಂತಿಗಳಿಗೆ ಕಿವಿಗೊಟ್ಟು ಷಡ್ಯಂತರ ನಡೆಸಿದ್ದಾರೆ. ಕೆ.ಪಿ.ಬಚ್ಚೇಗೌಡರು ಮಾಡಿರವ ಈ ಹುನ್ನಾರವನ್ನು ಚರಿತ್ರೆಯಲ್ಲಿ ಈ ಕ್ಷೇತ್ರದ ಮತದಾರರು ಮತ್ತು ರೈತರು ಕ್ಷಮಿಸುವುದಿಲ್ಲ. ದಿವಂಗತರಾಗಿರುವ ಅವರ ತಂದೆಯ ಆತ್ಮಕ್ಕೂ ಶಾಂತಿ ಸಿಗದು ಎಂದರು.

ರೈತರು ಕ್ಷಮಿಸಲ್ಲ: ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ ಹುನ್ನಾರ ನಡೆಸಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದೆ. ಈ ಮೂಲಕ ಅವರ ಮತದಾರರಿಗೆ ಅವರೇ ಮೋಸ ಮಾಡಿದ್ದಾರೆ. ಈ ಹುನ್ನಾರವನ್ನು ಯಾವುದೇ ಕಾರಣಕ್ಕೂ ಮತದಾರರು ಮತ್ತು ರೈತರು ಕ್ಷಮಿಸುವುದಿಲ್ಲ ಎಂದು ತಿಳಿಸಿದರು.

ಜೆಡಿಎಸ್‌ಗೆ ಮತ ಹಾಕುವವರ ದಿಕ್ಕು ತಪ್ಪಿಸಿ ಕಾಂಗ್ರೆಸ್‌ಗೆ ಮತ ಹಾಕಿಸಿದ್ದಾರೆ. ಕಟ್ಟ ಕಡೆಯಲ್ಲಿ ಆದ ಷಡ್ಯಂತ್ರದಿಂದ ನಮ್ಮ ಮುಖಂಡರು ಹೆಚ್ಚಿನ ಮತ ಹಾಕಿಸಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಜನ ಮತಹಾಕಿದ್ದಾರೆ. ಅವರಿಗೆ ನಾನು ವಿಶೇಷವಾದ ಕೃತಜ್ಞತೆಗಳನ್ನು ತಿಳಿಸುತ್ತೇನೆ. ನಮ್ಮ ನಿರೀಕ್ಷೆ 90 ಸಾವಿರ ಇತ್ತು. ಇನ್ನು 15 ಸಾವಿರ ಮತಗಳನ್ನು ತೆಗೆದುಕೊಂಡಿದ್ದರೆ ಗೆಲ್ಲಬಹುದಿತ್ತು. ಗೆಲುವು ಶಾಶ್ವತವಲ್ಲ. ಸೋಲೂ ಅಂತಿಮವಲ್ಲ. ಕ್ಷೇತ್ರದಲ್ಲಿ ನನ್ನ ಸೇವಾ ಮನೋಭಾವ ಇದೇ ರೀತಿ ಮುಂದುವರಿಯಲಿದೆ ಎಂದರು.

ಜೆಡಿಎಸ್‌ನವರ ಇಂತಹ ನಿರ್ಧಾರಗಳಿಂದ ಈಗಾಗಲೇ ರಾಜ್ಯದ ಜನ ಆ ಪಕ್ಷವನ್ನು ತಿರಸ್ಕರಿಸಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಶೇ.5ರಷ್ಟು ಮತದಾರರು ಕಾಂಗ್ರೆಸ್‌ ಪರ ಮತ ಚಲಾಯಿಸುವ ಮೂಲಕ ಜೆಡಿಎಸ್‌ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಆ ಪಕ್ಷ ಇರುವುದೇ ಅನುಮಾನ. ದೇಶ ನಿರ್ಮಾಣಕ್ಕಾಗಿ ಅವರು ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವುದು ಒಳಿತು ಎಂದು ಕಿಡಿ ಕಾರಿದರು.

ನನ್ನ ಸೋಲು ಅಭಿವೃದ್ಧಿಯ ಸೋಲು. ಧೀಮಂತ ನಾಯಕರು ಇತಿಹಾಸದಲ್ಲಿ ಸೋತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇರುತ್ತೋ ಅಲ್ಲಿಯವರೆಗೂ ಧೈರ್ಯಗುಂದುವ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಾತಾವರಣ ನಿರ್ಮಾಣ ಮಾಡೋಣ. ಜೂನ್‌ ತಿಂಗಳಿಂದ ನಾನು ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುತ್ತೇನೆ. ಜನರ ಸಮಸ್ಯೆಗಳಿಗೆ ದನಿಯಾಗುತ್ತೇನೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದಿರುವ ಅಭ್ಯರ್ಥಿ ಈಗಿರುವ ಅಭಿವೃದ್ಧಿ ಪಥವನ್ನು ಮನ್ನಡೆಸಿಕೊಂಡು ಹೋಗಲು ಸಹಕಾರ ಕೊಡುತ್ತೇನೆ. ಆದರೆ ವಿನಾಕಾರಣ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದರೆ ಪ್ರತಿಭಟಿಸುತ್ತೇನೆ. ಈಗಾಗಲೇ ಹಲವು ಕಡೆ ದೌರ್ಜನ್ಯಗಳು ನಡೆಯುತ್ತಿದ್ದು ಇದನ್ನು ಸಹಿಸಲ್ಲ ಎಂದರು.

ಅಂಬೇಡ್ಕರ್‌ ಅವರ ಫೋಟೋವನ್ನು ಎತ್ತಿಕೊಂಡು ತಿರುಗಿದರೆ ಅವರ ಆಶಯಗಳನ್ನು ಸಾಧಿಸಲು ಆಗಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಮಾಡಬೇಕು. ಆ ಕೆಲಸವನ್ನು ಮಾಡಬೇಕು ಎಂದು ತಿರುಗೇಟು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!