Sunday, August 14, 2022

Latest Posts

ನಾನು ಜಯಲಲಿತಾ ಸಹೋದರ, ನನಗೆ ಆಸ್ತಿ ಬರಬೇಕು: ಹೈಕೋರ್ಟ್ ಮೊರೆಹೋದ ಮತ್ತೊಬ್ಬ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ವ್ಯಕ್ತಿ ಓರ್ವ ಮದ್ರಾಸ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ.
ಮೈಸೂರಿನ ವ್ಯಾಸಪುರಂನ ವಾಸುದೇವನ್ ಎನ್ನುವ 83 ವರ್ಷದ ವ್ಯಕ್ತಿಯೊಬ್ಬರು ತಾವು ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ಅವರ ತಂದೆ ಆರ್. ಜಯರಾಮ್ ನನ್ನ ತಂದೆ. ಜಯರಾಮ್ ಅವರ ಮೊದಲ ಪತ್ನಿ ಜೆ. ಜಯಮ್ಮ ಅವರಿಗೆ ನಾನು ಒಬ್ಬನೇ ಮಗ ಮತ್ತು ನಾನು ಅವರ ಏಕೈಕ ವಾರಸುದಾರ ಎಂದು ಅವರು ಹೇಳಿದ್ದಾರೆ.
ನನ್ನ ತಾಯಿ ಜಯಮ್ಮ ಅವರನ್ನು ಜಯರಾವ್​ ಅವರು ಮೊದಲೇ ಮದುವೆಯಾಗಿದ್ದರು. ನಂತರ ಅವರ ಪತ್ನಿಯಾಗಿ ಬಂದದ್ದು ವೇದವಲ್ಲಿ ಅಲಿಯಾಸ್ ವೇದಮ್ಮ. ಈ ಎರಡನೆಯ ಪತ್ನಿಗೆ ಹುಟ್ಟಿದ್ದು, ಜಯಕುಮಾರ್ ಮತ್ತು ಜಯಲಲಿತಾ. ಆದ್ದರಿಂದ ಜಯಲಲಿತಾ ಮತ್ತು ಜಯಕುಮಾರ್ ನನ್ನ ಸಹೋದರ ಮತ್ತು ಸಹೋದರಿಯರು ಎಂದು ವಾಸುದೇವನ್​ ಹೇಳಿದ್ದಾರೆ.
1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಮಕ್ಕಳಾದ ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ಇದೇ ನಾನು ಅವರ ಸಹೋದರ ಎನ್ನುವುದಕ್ಕೆ ಸಾಕ್ಷಿ. ಈ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು. ಜಯಕುಮಾರ್ ಅವರು ಜಯಲಲಿತಾ ಅವರಿಗಿಂತ ಮುಂಚೆಯೇ ನಿಧನರಾದರು. ಹಾಗಾಗಿ ಇಂದು ನಾನು ಸಹೋದರನಾಗಿ ಜಯಲಲಿತಾ ಅವರ ನೇರ ಉತ್ತರಾಧಿಕಾರಿ. ಹಾಗಾಗಿ ಜಯಲಲಿತಾ ಅವರ ಆಸ್ತಿಯಲ್ಲಿ ಶೇ 50ರಷ್ಟು ನನಗೆ ನೀಡಬೇಕು ಎಂದಿರುವ ವಾಸುದೇವನ್​, ಈ ಕುರಿತು ಆದೇಶ ಹೊರಡಿಸುವಂತೆ ಕೋರ್ಟ್​ ಅನ್ನು ಕೋರಿದ್ದಾರೆ.

ಈ ಮೊದಲು ಜೆ. ದೀಪಕ್ ಮತ್ತು ಜೆ. ದೀಪಾ ಎನ್ನುವವರು ತಾವು ಜಯಲಲಿತಾ ಅವರ ವಾರಸುದಾರರು ಎಂದು ಹೇಳಿಕೊಂಡು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಕರ್ನಾಟಕದ ಅಮೃತಾ ಅವರು ನಟ ಶೋಬನ್‌ಬಾಬು ಮತ್ತು ಜಯಲಲಿತಾ ಅವರ ಪುತ್ರಿ ಎಂದು ಹೇಳಿಕೊಂಡು ಮೊಕದ್ದಮೆ ಹೂಡಿದ್ದರು. ಆದರೆ ಜೆ. ದೀಪಕ್ ಮತ್ತು ಜೆ. ದೀಪಾ ಅವರು ವಾರಸುದಾರರು ಎಂದು ಕೋರ್ಟ್​ ಹೇಳಿತ್ತು. ಅಮೃತಾ ಅವರ ಅರ್ಜಿಯನ್ನು ವಜಾ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss