ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿಪಥ್ ಯೋಜನೆ ಕುರಿತು ಇಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ನಡುವೆ ಮಾತಿನ ಜಟಾಪಟಿ ನಡೆದಿದೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅಗ್ನಿಪಥ್ ಯೋಜನೆಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಸಚಿವ ರಾಜನಾಥ್ ಸಿಂಗ್, ಸದನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.
ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅಗ್ನಿಪಥ್ ಯೋಜನೆಯು ದೇಶದ ಸೈನಿಕರು ಮತ್ತು ಅವರ ಕುಟುಂಬಗಳ ಆರ್ಥಿಕ ಭದ್ರತೆ ಮತ್ತು ಗೌರವವನ್ನು ಕಸಿದುಕೊಂಡಿದೆ ಎಂದು ಪ್ರತಿಪಾದಿಸಿದ್ದರು. ಈ ಯೋಜನೆಯು ಸರ್ಕಾರದ ಯುವಕರ ವಿರೋಧಿ ಮತ್ತು ರೈತ ವಿರೋಧಿ ಧೋರಣೆಯನ್ನು ಬಹಿರಂಗಪಡಿಸುತ್ತದೆ ಎಂದು ಅವರು ಆರೋಪಿಸಿದ್ದರು.
ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ,ಬಜೆಟ್ ಕುರಿತು ರಾಹುಲ್ ಗಾಂಧಿಯವರು ಹಲವಾರು ತಪ್ಪು ಕಲ್ಪನೆಗಳನ್ನು ಪ್ರಚಾರ ಮಾಡಿದ್ದಾರೆ . ರಾಹುಲ್ ಗಾಂಧಿ ಅಗ್ನಿಪಥ್ ಯೋಜನೆಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.
ರಾಷ್ಟ್ರೀಯ ಭದ್ರತೆಯ ವಿಷಯವು ಸೂಕ್ಷ್ಮವಾಗಿದೆ. ಅಗ್ನಿವೀರ್ ಸೈನಿಕರ ಬಗ್ಗೆ ದೇಶವಾಸಿಗಳನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ನೀವು ಕೇಳಿದಾಗ ಸದನದ ಮುಂದೆ ಅಗ್ನಿವೀರ್ ಸೈನಿಕರ ವಿಷಯದ ಬಗ್ಗೆ ನನ್ನ ಹೇಳಿಕೆ ನೀಡಲು ನಾನು ಸಿದ್ಧ ಎಂದು ಹೇಳಿದ್ದಾರೆ.