ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್ ಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಿವಾಸಿ ಭಕ್ತಿ ನರಸಿಂಹ ಸ್ವಾಮಿ ಅವರು ಆಗಮಿಸಿದ್ದಾರೆ.
ಈ ಕುರಿತು ಖುಷಿ ಹಂಚಿಕೊಂಡ ಅವರು , ನಾನು ಕುಂಭಮೇಳದಲ್ಲಿ ಭಾಗವಹಿಸಬೇಕೆಂಬ ಬಹುಕಾಲದ ಕನಸು ಈಗ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಕುಂಭಮೇಳದ ಬಗ್ಗೆ ಕೇಳಿದ್ದೆ. ಆದರೆ ನನಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಕುಂಭ ಮೇಳ ಒಂದು ದೊಡ್ಡ ಹಬ್ಬವಾಗಿದ್ದು ನಾನು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ ಎಂದು ಹೇಳಿದರು.
ಸನಾತನ ಧರ್ಮ ಸ್ವೀಕರಿಸಿದ್ದು ಯಾಕೆ ಎಂಬ ಪ್ರಶ್ನೆಗೆ, ನಾನು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ್ದೆ. ಆದರೆ ಯೇಸುಕ್ರಿಸ್ತನನ್ನು ಸ್ವೀಕರಿಸದಿದ್ದರೆ ನೀವು ನರಕಕ್ಕೆ ಹೋಗುತ್ತೀರಿ ಎಂದು ಹೇಳುತ್ತಿದ್ದಂತಹ ಕ್ರಿಶ್ಚಿಯನ್ ಧರ್ಮದಲ್ಲಿನ ವಿಷಯಗಳು ನನಗೆ ಇಷ್ಟವಾಗಲಿಲ್ಲ. ಆ ಸಮಯದಲ್ಲಿ ನವಜಾತ ಶಿಶು ಒಂದು ವರ್ಷದ ನಂತರ ಸತ್ತರೆ ಮತ್ತು ಆ ಮಗು ಕ್ರಿಶ್ಚಿಯನ್ ಧರ್ಮಕ್ಕೆ ಬದ್ಧನಾಗಿಲ್ಲದಿದ್ದರೆ ಆ ಮಗು ಎಲ್ಲಿಗೆ ಹೋಗುತ್ತದೆ ಎಂದು ನಾನು ಯೋಚಿಸುತ್ತಿದ್ದೆ? ಅಂತಿಮವಾಗಿ ಆಧ್ಯಾತ್ಮಿಕ ತಿಳುವಳಿಕೆಗಾಗಿ ಸನಾತನ ಧರ್ಮವನ್ನು ಓದತೊಡಗಿದೆ. ಈ ವೇಳೆ ನನ್ನ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದರಿಂದ ನಾನು ಸನಾತನ ಧರ್ಮವನ್ನು ಸ್ವೀಕರಿಸಿದೆ. ಈಗ ನಾನು ಸನಾತನ ಧರ್ಮವನ್ನು ನಂಬುತ್ತೇನೆ ಮತ್ತು ನಾನು ಸಾಧುವಾದೆ ಎಂದು ಉತ್ತರಿಸಿದರು.
ವಿಶೇಷವಾಗಿ ಒಳ್ಳೆಯ ಜನರಿಗೆ ಕೆಡುಕು ಯಾಕೆ ಸಂಭವಿಸುತ್ತವೆ ಎಂಬ ಪ್ರಶ್ನೆಗೆ ಸನಾತನ ಧರ್ಮದಲ್ಲಿ ಕಂಡುಬರುವ ಕರ್ಮ ಮತ್ತು ಪುನರ್ಜನ್ಮದ ತತ್ವಗಳ ಮೂಲಕ ಉತ್ತರಗಳನ್ನು ತಿಳಿದುಕೊಂಡೆ. ಜೀವನ ಎನ್ನುವುದು ಒಂದು ಚಕ್ರದಂತೆ ತಿರುಗುತ್ತಿರುತ್ತದೆ. ಜೀವನ ನಿರಂತರ ಪ್ರಯಾಣವಾಗಿದೆ. ಹಿಂದಿನ ಕರ್ಮಗಳು ಈ ಜೀವನದಲ್ಲಿ ಕೊನೆಗೊಳ್ಳುತ್ತವೆ ಎಂದು ವಿವರಿಸಿದರು.