ಬೊಮ್ಮಾಯಿ ಅವರನ್ನು ನಾಯಿ ಮರಿ ಎಂದು ನಾನು ಹೇಳಿಲ್ಲ: ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿ ಮರಿ ಎಂದು ನಾನು ಹೇಳಿಲ್ಲ. ಧೈರ್ಯ ಇರಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ. ನಮಗೆ ರಾಜ್ಯದ ಹಿತ ಮುಖ್ಯ. ಕೇಂದ್ರದೊಂದಿಗೆ ಧೈರ್ಯವಾಗಿ ಮಾತನಾಡಿ ದುಡ್ಡು ತರಬೇಕು. ಕೇಂದ್ರದಿಂದ ಬರುವ ಅನುದಾನಗಳು ಕಡಿಮೆಯಾಗಿದೆ. ಆದ್ದರಿಂದ ಇವರು ಧೈರ್ಯವಾಗಿರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ‘ಟಗರು’, ‘ಹುಲಿಯಾ’ ಅನ್ನುತ್ತಾರೆ. ಅದು ಅಸಾಂವಿಧಾನಿಕವೇ?, ಯಡಿಯೂರಪ್ಪನವರನ್ನು ಅವರ ಪಕ್ಷದವರೇ ‘ರಾಜಾಹುಲಿ’ ಎಂದು ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ‘ಹುಲಿ’ಯೇ?. ನಾಯಿ ಬಹಳ ನಂಬಿಕಸ್ಥ ಪ್ರಾಣಿ. ಧೈರ್ಯ ಅನ್ನುವ ಅರ್ಥದಲ್ಲಿ ಆ ಪದ ಬಳಕೆ ಮಾಡಿದೆ ಎಂದರು.

ನಳಿನ್ ಅವರು ಬಾಲಿಶವಾಗಿ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ಯಾವುದೇ ಪ್ರಕರಣದಲ್ಲಿ ಜೈಲಿಗೆ ಕಳುಹಿಸುವ ಬಗ್ಗೆ ತೀರ್ಮಾನಿಸುವುದು ನ್ಯಾಯಾಲಯ ಹೊರತು ನಳಿನ್‌ಕುಮಾರ್ ಅಲ್ಲ. ಕಾನೂನು ಬಗ್ಗೆ ಅರಿವಿಲ್ಲದೆ ಏನೇನೋ ಮಾತನಾಡುತ್ತಾರೆ. ನಳಿನ್ ಅವರ ಹೇಳಿಕೆಗಳನ್ನು ನೋಡುವಾಗ ಬಿಜೆಪಿಯ ಜೋಕರ್‌ನಂತೆ ಕಾಣುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ವಿಧಾನಸಭೆ ಬಳಿ 10 ಲಕ್ಷ ರೂ. ಅನಧಿಕೃತ ಹಣವನ್ನು ಪೊಲೀಸರು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಬೇಕಾದಷ್ಟಿವೆ. ಆದ್ದರಿಂದ ಇವರನ್ನು ಗುತ್ತಿಗೆದಾರರ ಅಸೋಸಿಯೇಷನ್ ನವರು ಶೇ.40 ಕಮಿಷನ್ ಸರಕಾರ ಎಂದು ಕರೆದಿದ್ದಾರೆ. ಈಶ್ವರಪ್ಪ ಲಂಚ ಕೇಳಿದರೆಂದು ಸಂತೋಷ್ ಆತ್ಮಹತ್ಯೆ ಮಾಡಿಕೊಂಡರು. ಈ ಸರಕಾರದಲ್ಲಿ ಭ್ರಷ್ಟಾಚಾರವಿಲ್ಲದೆ ಏನೂ ನಡೆಯೊಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!