ದಿಗಂತ ವರದಿ ಹುಬ್ಬಳ್ಳಿ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಇದರಿಂದ ಕೈಗಾರಿಕೋದ್ಯಮಿಗಳು ಉದ್ಯಮ ಸ್ಥಾಪಿಸಲು ರಾಜ್ಯಕ್ಕೆ ಬರುತ್ತಿಲ್ಲ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಇಲ್ಲಿಯ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುಸಜ್ಜಿತವಾಗಿದೆ. ಯಾವತ್ತು ನಮ್ಮ ಕೈ ಮೀರಿ ಹೋಗಿಲ್ಲ. ಅಹಿತಕರವಾಗಿ ಕೆಲವೊಂದಿಷ್ಟು ಕೊಲೆ, ಕಳವು ಪ್ರಕರಣಗಳು ನಡೆದಿವೆ. ರಾಜ್ಯ ಪೊಲೀಸರು ಉತ್ತಮ ಕಾರ್ಯದಿಂದ ಪ್ರಕರಣ ತನಿಖೆ ನಡೆಸಲಾಗಿದೆ. ಆದರೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಯಾವ ಆಧಾರ ಮೇಲೆ ಅಪಾಧನೆ ಮಾಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೀಸಲು ಹಣವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ರಾಜ್ಯದ ಅಭಿವೃದ್ಧಿ ಬಳಸಿಕೊಳ್ಳಲಾಗಿದೆ. ದಲಿತರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಮೀಸಲಿಟ್ಟಿದ್ದಾರೆ ಎಂದರು.
ಎಸ್ ಸಿ ಹಾಗೂ ಎಸ್ಟಿ ಮೀಸಲಾತಿ ಅನುದಾನ ಬಗ್ಗೆ ಮಾತನಾಡುವ ಕೇಂದ್ರ ಸಚಿವರು ಮಧ್ಯಪ್ರದೇಶದಲ್ಲಿ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಯಾಕೆ ಬಳಸಿಕೊಂಡಿದ್ದಾರೆ. ನಾವು ದಲಿತರ ಅಭಿವೃದ್ಧಿಗೆ ಬಳಸಿಕೊಂಡಿದ್ದೇವೆ ಎಂದು ತಿರಗೇಟು ನೀಡಿದರು.
ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿನಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವೇನು ಸನ್ಯಾಸತ್ವ ಪಡೆಯಲು ರಾಜಕಾರಣಕ್ಕೆ ಬಂದಿದ್ದೇವಾ?. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಪರೋಕ್ಷವಾಗಿ ತಾವು ಸಿಎಂ ಆಕಾಂಕ್ಷಿ ಎಂದರು.