ಹೊಸದಿಗಂತ ವರದಿ ಶಿವಮೊಗ್ಗ :
ದೇಶ ದ್ರೋಹಿ ಹೇಳಿಕೆ ನೀಡಿರುವ ಡಿ.ಕೆ. ಸುರೇಶ್ ಅವರಿಗೆ ಗುಂಡಿಟ್ಟು ಕೊಲ್ಲಿ ಎಂದು ನಾನೂ ಎಲ್ಲೂ ಹೇಳಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ್ರೋಹಿ ಹೇಳಿಕೆ ನೀಡುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತನ್ನಿ ಎಂದು ನಾನು ಪ್ರಧಾನ ಮಂತ್ರಿಗಳಿಗೆ ಒತ್ತಾಯಿಸಿದ್ದೇನೆ. ಇದನ್ನು ಕಾಂಗ್ರೆಸ್ ನಾಯಕರು ತಿರುಚಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದರು.
ನಾನು ಆರ್ ಎಸ್ಎಸ್ ತರಬೇತಿ ಪಡೆದಿರುವುದು ನಿಜ. ದೇಶವನ್ನು ಉಳಿಸುವಂತೆ ಸಂಘ ತರಬೇತಿ ನೀಡಿದೆ. ಕಾಂಗ್ರೆಸಿಗರಂತೆ ದೇಶ ಒಡೆಯುವ ಹೇಳಿಕೆ ನೀಡುವ ತರಬೇತಿಯಲ್ಲ. ಪ್ರಿಯಾಂಕ್ ಖರ್ಗೆ ತಮ್ಮ ತಂದೆಯ ಹೇಳಿಕೆಗೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಖರ್ಗೆ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ ಎಂದು ಹೇಳಿದರೆ, ಪ್ರಿಯಾಂಕ್ ಡಿ.ಕೆ. ಸುರೇಶ್ ಹೇಳಿಕೆಗೆ ಬೆಂಬಲಿಸುತ್ತಿದ್ದಾರೆ ಎಂದರು.
ತೆರಿಗೆ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲವೆಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಹೇಳುತ್ತಿದ್ದರೆ ಸಿಎಂ ಸಿದ್ಧರಾಮಯ್ಯನವರು ತಾರತಮ್ಯವಾಗಿದೆ ಎಂದು ಹೇಳುತ್ತಿದ್ದಾರೆ. ತೆರಿಗೆ ಹಂಚಿಕೆ ಬಗ್ಗೆ ರಾಜ್ಯ ಸರ್ಕಾರದಿಂದ ಶ್ವೇತ ಪತ್ರ ಹೊರಡಿಸಲಿ. ಆಗ ವಾಸ್ತವ ಸ್ಥಿತಿ ಗೊತ್ತಾಗಲಿದೆ ಎಂದರು.
ನಾನು ನೀಡಿದ ಹೇಳಿಕೆಯನ್ನಾಧರಿಸಿ ದಾವಣಗೆರೆಯಲ್ಲಿ ಎಫ್ ಐಆರ್ ಆಗಿರುವುದು ನಿಜ. ನೋಟೀಸ್ ಹಿಡಿದುಕೊಂಡು ಪೊಲೀಸರು ಬಂದಿರುವುದು ನಿಜ. ದೇಶದ ಉಳಿಸುವ ನಿಟ್ಟಿನಲ್ಲಿ ಇಂತಹ ನೂರು ಎಫ್ ಐ ಆರ್ ಆದರೂ ಹೆದರುವುದಿಲ್ಲ. ಡಿಕೆಶಿ ಯಂತೆ ನಾನು ಜೈಲಿಗೆ ಹೋಗಿಲ್ಲ. ಸಿದ್ದರಾಮಯ್ಯ, ರಾಮಲಿಂಗ ರೆಡ್ಡಿ ಮೊದಲಾದವರಿಗೆ ನ್ಯಾಯಾಲಯ 10 ಸಾವಿರ ರೂ.ದಂಡ ವಿಧಿಸಿದೆ. ಆ ರೀತಿ ನನಗೆ ನ್ಯಾಯಾಲಯ ದಂಡ ಹಾಕಿಲ್ಲ ಎಂದರು.