ನಾನು ಮೋದಿಗೆ ಬೈದಿಲ್ಲ, ರಾಜ್ಯದ ನಾಯಕರಿಗೆ ಬೈದಿಲ್ಲ: ರಘುಪತಿ ಭಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಪಕ್ಷದಿಂದ ತನ್ನನ್ನು ಉಚ್ಚಾಟಿಸಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯ ನೋಟಿಸ್ ಇದುವರೆಗೆ ತನಗೆ ತಲುಪಿಲ್ಲ. ಪಕ್ಷದ ಈ ರೀತಿಯ ವರ್ತನೆಯು ಪಕ್ಷಕ್ಕಾಗಿ ನಿಷ್ಠೆಯಿಂದ ಹಗಲಿರುಳು ದುಡಿಯವ ಕಾರ್ಯಕರ್ತನಿಗೆ ನಿರಂತರ ನೋವಾಗುತ್ತಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಭಾನುವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ನನ್ನದು ಕಾರ್ಯಕರ್ತ ಹುದ್ದೆ, ಪಕ್ಷದಲ್ಲಿ ನನಗೆ ಯಾವ ಹುದ್ದೆಯನ್ನು ಕೊಟ್ಟಿಲ್ಲ. ಬಿಜೆಪಿ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಸ್ಪಷ್ಟಪಡಿಸಬೇಕು. ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ತಪ್ಪಿದಾಗ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಆದರೆ ಪಕ್ಷ ನನ್ನನ್ನು ರಾಜ್ಯ ಕಾರ್ಯಕಾರಿ ಸದಸ್ಯನನ್ನೂ ಮಾಡಿಲ್ಲ. ಈ ವಜಾಕ್ಕೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ ನಾನು ಮೋದಿಗೆ ಬೈದಿಲ್ಲ, ರಾಜ್ಯದ ನಾಯಕರಿಗೆ ಬೈದಿಲ್ಲ. ಆದರೆ ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ ಎಂದರು.

ಪಕ್ಷದ ನಾಯಕರನ್ನು ಟೀಕೆ ಮಾಡಿದ ಜಗದೀಶ್ ಶೆಟ್ಟರ್ ಒಂದು ವರ್ಷದಲ್ಲಿ ಪಕ್ಷಕ್ಕೆ ವಾಪಾಸಾಗಿ ಲೋಕಸಭಾ ಟಿಕೆಟ್ ಪಡೆದುಕೊಂಡರು. ಇದು ಶಾಶ್ವತ ವಜಾ ಅಲ್ಲ. ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ. ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಪಕ್ಷದಿಂದ ವಜಾ ಮಾಡಲು ಸಾಧ್ಯವಿಲ್ಲ ಎಂದವರು ತಿಳಿಸಿದರು.

ಪಕ್ಷದ ದೃಷ್ಟಿಯಿಂದ ಜಿಲ್ಲಾಧ್ಯಕ್ಷರು, ಶಾಸಕ ಸುನಿಲ್ ಕುಮಾರ್ ಮಾಡುವುದು ಸರಿ ಇದೆ. ಪಕ್ಷದಿಂದ ವಜಾ ಮಾಡುವ ಸಮಾನ ನ್ಯಾಯ ಜಾರಿಗೆ ತನ್ನಿ. ಬಹಿರಂಗ ಹೇಳಿಕೆ ಕೊಡುವ ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ಮೇಲೆ ನಿಮ್ಮ ಕ್ರಮ ಏನು? ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ, ಯಾರು ಕೆಲಸ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳೇ ಆರೋಪ ಮಾಡುತ್ತಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ನಾನೊಬ್ಬ ಪಾಪದವ, ಬಡಪಾಯಿ ಮಾತ್ರ ನಿಮಗೆ ವಜಾಮಾಡಲು ಸಿಕ್ಕಿದ್ದಾ? ಎಂದು ಪ್ರಶ್ನಿಸಿದರು.

ನಾನು ವಿಚಲಿತನಾಗಿಲ್ಲ ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ ಜಗದೀಶ್ ಶೆಟ್ಟರ್ ಅವರ ಪ್ರಕರಣವೇ ನನಗೆ ಮಾದರಿ. ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ. ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ನಾಲ್ವರು ಹಾಲಿ ಎಂಎಲ್ಎಗಳನ್ನು ಬದಲಿಸಲಾಯಿತು. ಇದನ್ನು ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿಯಲ್ಲಿ ಮಾಡಲು ಸಾಧ್ಯವೇ..? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ, ಪಕ್ಷ ಅಂತ ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತಿದೆ. ಕರಾವಳಿಗೆ ಮೀಸಲಿಟ್ಟ ಸ್ಥಾನವನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ ಎಂದರು.

ಜಿಲ್ಲಾಧ್ಯಕ್ಷನಾಗಿ, ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅನೇಕರನ್ನು ಬೆಳೆಸಿದ್ದೇನೆ. ಶಾಸಕನಾಗಿ ಕಾರ್ಯಕರ್ತರಲ್ಲಿ ನಾಯಕತ್ವ ಗುಣವನ್ನು ಬೆಳೆಸಿ ನಾಯಕನನ್ನಾಗಿಸಿದ್ದೇನೆ. ಈಗ ನಾನು ಕೈ ಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!