ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಗಿರಿ ಆದಿಲ್ ಸಾವು ಪ್ರಕರಣ ಹಾಗೂ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಘಟನೆಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದೆ. ಅವರೆಲ್ಲಾ ನ್ಯಾಯಾಂಗ ಬಂಧನದಲ್ಲಿದ್ದು, ಬಂಧಿತರ ಮೇಲೆ ಯಾವುದೇ ಹಳೇ ಕೇಸ್‌ಗಳಿಲ್ಲ. ಗುಂಪಿನಲ್ಲಿದ್ದ ಕೆಲ ಯುವಕರು ಠಾಣೆ ಮೇಲೆ ಕಲ್ಲೆಸೆದಿದ್ದಾರೆ. ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ಪ್ರಕರಣ ದಾಖಲಾಗಿದೆ.
ಇನ್ನು ಆದಿಲ್ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನಷ್ಟೇ ವರದಿ ನಮ್ಮ ಕೈಸೇರಬೇಕಿದೆ. ಇನ್ಮೆರೆಡು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ಯುವಕನ ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯ ಎದುರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಈ ಸಂಬಂಧ 25 ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯುವಕನ ಲಾಕಪ್ ಡೆತ್ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಆದಿಲ್ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಪ್ರಾಥಮಿಕ ವರದಿ ನೀಡಿದ ಮೇಲೆ ಸತ್ಯಾಸತ್ಯತೆ ತಿಳಿಯಲಿದೆ.