ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ವಿಫಲನಾಗಿದ್ದೇನೆ. ಪ್ರವಾಸೋದ್ಯಮ ಸಚಿವಾಲಯ ಜವಾಬ್ದಾರಿ ಹೊತ್ತಿರುವ ನಾನು ಹೇಗೆ ಮಡಿದ 26 ಕುಟುಂಬದ ಬಳಿ ಕ್ಷಮೆ ಕೇಳಲಿ? ನನ್ನಲ್ಲಿ ಕ್ಷಮೆ ಕೇಳಲು ಪದಗಳು ಉಳಿದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಅಂಗೀಕರಿಸಲಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಜಮ್ಮು ಮತ್ತು ಕಾಶ್ಮೀರ ಹಲವು ದಾಳಿಗಳನ್ನು ನೋಡಿದೆ. ಆದರೆ ಕಳೆದ 21 ವರ್ಷದಲ್ಲಿ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಈ ಪರಿಸ್ಥಿತಿ ಮುಂದಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೇಳಲ್ಲ ಎಂದು ಹೇಳಿದ್ದಾರೆ.
ಇಡೀ ದೇಶವೇ ಈ ದಾಳಿಗೆ ಶೋಕಾಚರಣೆ ನಡೆಸಿದೆ. ತೀವ್ರ ನೋವಾಗಿದೆ. ಬೈಸರನ್ ಕಣಿವೆಯಲ್ಲಿ ನಡೆದ ಈ ದಾಳಿ ಕಳೆದ 21 ವರ್ಷದಲ್ಲಿ ನಡೆದ ಅತೀ ದೊಡ್ಡ ದಾಳಿಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸುವ ಪ್ರವಾಸಿಗರನ್ನು ಅತ್ಯಂತ ಸುರಕ್ಷತೆಯಲ್ಲಿ ವಾಪಾಸ್ ಕಳುಹಿಸುವ ಜವಾಬ್ದಾರಿ ನನ್ನದು. ಆದರೆ ನಾನು ವಿಫಲನಾದೆ. 26 ಕುಟುಂಬದ ಬಳಿ ಹೇಗೆ ಕ್ಷಮೆ ಕೇಳಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೆಹಲ್ಗಾಂನಲ್ಲಿ ನಡೆದ ಈ ದಾಳಿಗೆ ದೇಶ ಮರುಗಿದೆ. ಈ ಸಂದರ್ಭ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಸ್ಥಾನಮಾನ ನೀಡಿ ಎಂದು ಕೇಳಬೇಕಾ? ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾಮಾನಮಾನಕ್ಕೆ ಈ ಹಿಂದೆ ಹೋರಾಟ ಮಾಡಿದ್ದೇವೆ, ಮುಂದೆ ಮಾಡುತ್ತೇವೆ. ಆದರೆ ಈ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ. ಯಾವ ಮುಖ ಇಟ್ಟುಕೊಟ್ಟು ರಾಜ್ಯ ಸ್ಥಾನಮಾನ ಕೇಳಲಿ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ರಾಜ್ಯಕ್ಕೆ ಬರುವವರ ಸುರಕ್ಷತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜವಾಬ್ದಾರಿ ಮಾತ್ರ ಆಗಿರಲಿಲ್ಲ. ಅದು ಮುಖ್ಯಮತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಜವಾಬ್ದಾರಿಯಾಗಿತ್ತು. ಎರಡು ಪ್ರಮುಖ ಜವಾಬ್ದಾರಿ ಹೊತ್ತಿರುವ ನಾನು ಅತಿಥಿಗಳಿಗೆ ರಕ್ಷಣೆ ನೀಡಲು ವಿಫಲನಾದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಉಗ್ರರನ್ನು ನಾವು ಶಸ್ತ್ರದ ಮೂಲಕ ಅಂತ್ಯಗೊಳಿಸಬಹುದು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸಲು ಜನರ ನೆರವು ಅಗತ್ಯ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.