ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮೈಯಲ್ಲಿ ಬಿಜೆಪಿಯ ರಕ್ತ ಹರಿಯುತ್ತಿದೆ , ಒಂದು ಸಿದ್ಧಾಂತಕ್ಕಾಗಿ ಇಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದೇನೆ ಎಂದು ಕೆ. ಎಸ್ ಈಶ್ವರಪ್ಪ ಹೇಳಿದರು.
ಅಂಬುತೀರ್ಥ ಪಟ್ಟಣದ ಮಾರಿಕಾಂಬಾ ದೇವಸ್ಥಾನ ಮತ್ತು ರಾಮೇಶ್ವರ ದೇವಸ್ಥಾನಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಕಾರಣಕ್ಕಾಗಿ ಪಕ್ಷದ ಶಿಸ್ತು ಮೀರಿ ಹೋರಾಟ ನಡೆಸುತ್ತಿದ್ದೇನೆ. ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಅವರ ಜತೆ ಕೈಜೋಡಿಸುವುದಾಗಿ ಹೇಳಿದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ ಆಗಿರುವುದರಿಂದ ಪಕ್ಷದ ನಿಯಮಗಳನ್ನು ಮೀರಿ ಎಂದೂ ನಡೆದುಕೊಂಡಿಲ್ಲ. 2012ರಲ್ಲಿ ಪಕ್ಷದ ಪ್ರಕಾರ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸ್ಥಾಪಿಸಿದ್ದೆ. ಚುನಾವಣೆಗೆ ನಿಲ್ಲಬೇಡಿ ಎಂದು ಕೇಳಿದಾಗ ಎರಡು ನಿಮಿಷದಲ್ಲಿ ಒಪ್ಪಿಗೆ ಸೂಚಿಸಿದೆ. ಆದರೆ ಈ ಬಾರಿ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ 27 ಕ್ಷೇತ್ರಗಳಿದ್ದು, ಶಿವಮೊಗ್ಗದಲ್ಲಿ ನನ್ನ ಗೆಲುವು ಖಚಿತ. ನನ್ನ ನಿರ್ಧಾರವನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.