ಹೊಸದಿಗಂತ ವರದಿ ರಾಯಚೂರು:
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. 240 ತಾಲೂಕುಗಳಲ್ಲಿ 217 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲಾಗಿದ್ದು, ಇನ್ನು 10 ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು.

ಗುರುವಾರ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಹಾಗೂ ಕಲಮಂಗಿ ಗ್ರಾಮಗಳಲ್ಲಿ ಬರಗಾಲ ವೀಕ್ಷಣೆ ಮಾಡಿ, ಕಲಮಂಗಿ ಗ್ರಾಮದಲ್ಲಿ ರೈತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿನ ಕರಾವಳಿ ವ್ಯಾಪ್ತಿಯಲ್ಲಿನ ನಾಲ್ಕಾರು ತಾಲೂಕುಗಳನ್ನು ಬಿಟ್ಟರೆ, ರಾಜ್ಯದಲ್ಲಿ 125 ವರ್ಷಗಳ ನಂತರ ಇಂತಹ ಭೀಕರ ಬರಗಾಲ ಬಂದಿದೆ ಎಂದರು.
ನನ್ನ ರಾಜಕೀಯ 40 ವರ್ಷಗಳ ಅವಧಿಯಲ್ಲಿ ಇಂತಹ ಬರಗಾಲವನ್ನು ಕಂಡಿಲ್ಲ. ರೈತ ನಮಗೆಲ್ಲ ಅನ್ನವನ್ನು ನೀಡುತ್ತಾನೆ. ಮಳೆ ಇಲ್ಲದ ಕಾರಣಕ್ಕೆ ಭೂಮಿಯ ಮಣ್ಣು ಸುಡುತ್ತಿದೆ. ಈ ಸುಡುವ ಮಣ್ಣಲ್ಲಿ ಬೆಳೆ ಬರುವುದಕ್ಕೆ ಸಾಧ್ಯವೇ ಇಲ್ಲ. ತೊಗರಿ ಬೆಳೆ ಸೇರಿದಂತೆ ಎಲ್ಲ ಬೆಳೆಗಳು ಹಾಳಾಗಿವೆ. 10 ಸ್ಥಳಗಳಲ್ಲಿ ಒಂದೇ ಒಂದು ಸ್ಥಳದಲ್ಲಿಯೂ ಬೆಳೆ ಬಂದಿಲ್ಲ ಎಂದು ಹೇಳಿದರು.
ರೈತ ಕೈಸಾಲ ಸೇರಿದಂತೆ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದಾನೆ. ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಹಲವೆಡೆ ಬರಗಾಲ ಕುರಿತು ಸಭೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಬರಗಾಲದ ವಾಸ್ತವ ಸ್ಥಿತಿಯನ್ನು ವಿರೋಧ ಪಕ್ಷದವರ ಗಮನಕ್ಕೆ ತರುವುದಕ್ಕೆ 4 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಿಂದ ಪರಿಹಾರವನ್ನು ತರುವಂತೆ ಅವರು ಮುಂದಾಗಲಿ ಎಂದು ಹೇಳಿದರು.
ರೈತರ ಪರವಾಗಿ ರಾಜ್ಯ ಸರ್ಕಾರವಿದೆ. ಪ್ರಸಕ್ತ ರೈತರ ಸಂಕಷ್ಟಕ್ಕೆ ತಕ್ಷಣದಲ್ಲಿ ಪರಿಹಾರವನ್ನು ನೀಡುವ ಚಿಂತನೆ ನಮ್ಮದಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಕೇವಲ ಕಾಂಗ್ರೆಸ್ ಬೆಂಬಲಿತರಿಗೆ ನೀಡುತ್ತಿಲ್ಲ. ಬರ ಪರಿಹಾರಕ್ಕೆ ಈಗ 1,250 ಕೋಟಿ ನೀಡಲು ನಿರ್ಧರಿಸಿದೆ. ಪ್ರತಿ ರೈತರಿಗೆ 2,500 ನೀಡಲು ನಿರ್ಧರಿಸಿದೆ ಎಂದರು.
ರೈತರ ಪಂಪ್‌ಸೆಟ್ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಒಟ್ಟು 22,000 ಹಣವನ್ನು ಸರ್ಕಾರ ಪ್ರತಿ ರೈತನಿಗೆ ವೆಚ್ಚ ಮಾಡುತ್ತಿದೆ ಎಂದು ತಿಳಿಸಿದರು.

ಬರಗಾಲದಿಂದಾಗಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಬೆಳೆ ಏನೇನೂ ರೈತರಿಗೆ ಸಿಗುವುದಿಲ್ಲ. ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರು ಕೊಡಬೇಕಾಗಿದೆ. ಈ ಭಾಗದಲ್ಲಿ ಅಂತರ್ಜಲ 250 ಅಡಿ ವರೆಗೆ ದೊರೆತರೆ, ಕೋಲಾರದ ಭಾಗದಲ್ಲಿ 1,000 ಅಡಿಗೂ ಅಧಿಕ ಆಳಕ್ಕೆ ನೀರು ಹೋಗಿದೆ. ಜಾನುವಾರುಗಳಿಗೆ ಮೇವು, ನೀರಿಗಾಗಿ 25 ಕೋಟಿ ಪ್ರತಿ ಜಿಲ್ಲೆಗೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕೆಕೆಆರ್‌ಡಿಬಿಗೆ ಪ್ರತಿ ವರ್ಷ 5,000 ಕೋಟಿ ನೀಡಿದ್ದೇವೆ. ಜನತೆ ಕೆಲಸ ಅರಸುತ್ತ ಗುಳೆ ಹೊರಟಿದ್ದಾರೆ. ಇದನ್ನು ತಪ್ಪಿಸಲು ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಅರಸಿ ಬರುವ ಎಲ್ಲ ಜನತೆಗೆ ಉದ್ಯೋಗ ನೀಡಬೇಕು ಹಾಗೂ ಪ್ರತಿ ವಾರ ಹಣವನ್ನು ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಗೆ ನಿರ್ದೇಶನ ನೀಡಿದರು.
ರೈತರಿಗೆ ವಿದ್ಯುತ್ ನೀಡುವುದಿಲ್ಲ. ಎಇಇ ಫೋನ್ ಎತ್ತುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಸತತ 6 ಗಂಟೆ ಹಗಲು ಹೊತ್ತಲ್ಲಿ ವಿದ್ಯುತ್ ನೀಡಿರಿ. ವೋಲ್ಟೇಜ್ ಸರಿಯಾಗಿ ನೀಡಿರಿ. ಹಗಲು ಹೊತ್ತಲ್ಲಿ ವಿದ್ಯುತ್ ನೀಡಿರಿ ಎಂದರು. ರೈತರ ಪಂಪ್‌ಸೆಟ್‌ಗೆ ಕೇವಲ 3 ಗಂಟೆ ನೀಡಲಾಗುತ್ತಿದೆ. ತಹಶೀಲ್ದಾರ್ ಸಹ ಫೋನ್ ಎತ್ತುವುದಿಲ್ಲ. ನನಗೆ ಉತ್ತರ ಕೊಡುತ್ತೀರಾ ಎಂದು ತಹಶೀಲ್ದಾರ್‌ಗೆ ರೈತರು ಹರಿಹಾಯ್ದರು.

ಶಕ್ತಿ ಯೋಜನೆಯಿಂದಾಗಿ ಬಸ್ಸಿಗೆ ಡೀಸೆಲ್ ಇಲ್ಲ ಎಂದು ಕೊಪ್ಪಳದಲ್ಲಿ ಹೇಳಿದರು. ತಕ್ಷಣ ಸಾರಿಗೆ ಸಚಿವರೊಂದಿಗೆ ಮಾತನಾಡಿ ಡೀಸೆಲ್‌ಗೆ ಹಣ ನೀಡುವಂತೆ ವ್ಯವಸ್ಥೆ ಮಾಡಿರುವೆ ಎಂದು ತಿಳಿಸಿದರು.
ಕೆಪಿಸಿಎಲ್ ಗೌರವ ಗುಪ್ತಾ ಅವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕರೆಂಟ್ ಕಟ್ ಮಾಡಿದ್ದನ್ನು ಮತ್ತೆ ನೀಡುವುದಿಲ್ಲ. ಅದನ್ನು ಮತ್ತೆ ನೀಡುವಂತೆ ರೈತರು ಆಗ್ರಹಿಸಿ ಒಟ್ಟು 6 ಗಂಟೆ ಕರೆಂಟ್ ಕೊಡಲಿ. ಉದ್ಯೋಗ ಖಾತರಿ ಹಣವನ್ನು ಸರಿಯಾಗಿ ಹಾಕುತ್ತಿಲ್ಲ. ತಿಂಗಳುಗಟ್ಟಲೆ ಹಾಕುತ್ತಿಲ್ಲ ಎಂದು ಜನತೆ ದೂರಿದರು.
ನನಗೆ ಯಾವುದೇ ಕಾರಣ ಹೇಳಬೇಡಿ. ಪ್ರತಿ ವಾರವೂ ಉದ್ಯೋಗ ಖಾತರಿಯ ಕೂಲಿ ಹಣ ಫಲಾನುಭವಿಗಳಿಗೆ ಹಾಕಿರಿ ಎಂದು ಸೂಚಿಸಿದರು.
ಕೊಪ್ಪಳ ಲೋಕಸಭಾ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



