ʼನನ್ನ ಜೀವನದ ಒಂದು ಭಾಗ ಕಳೆದುಕೊಂಡೆ.. ಈಗ ರೆಸ್ಟ್‌ ಮಾಡು ಅಮ್ಮʼ ಸುದೀಪ್‌ ಕಣ್ಣೀರಿನ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಕಿಚ್ಚ ಸುದೀಪ ಅವರ ತಾಯಿ ಸರೋಜ ನಿನ್ನೆ ವಿಧಿವಶರಾಗಿದ್ದಾರೆ. ನಿನ್ನೆ ಸಂಜೆ ಅಂತ್ಯಕ್ರಿಯೆ ನೆರವೇರಿದ್ದು, ಸಿನಿ ರಂಗದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇಂದು ನಟ ಸುದೀಪ್‌ ಭಾವನಾತ್ಮಕ ಪೋಸ್ಟ್‌ ಒಂದನ್ನು ಮಾಡಿದ್ದಾರೆ.. ಪೋಸ್ಟ್‌ನ ಕೊನೆಯ ಸಾಲು ಓದುವುದರೊಳಗೆ ಕಣ್ಣಾಲೆಗಳು ಒದ್ದೆಯಾಗುತ್ತವೆ..

ನನ್ನ ತಾಯಿ ಸಾಕಷ್ಟು ಪ್ರೀತಿ ತೋರಿಸುತ್ತಿದ್ದರು. ಕ್ಷಮಿಸುತ್ತಿದ್ದರು, ಕಾಳಜಿವಹಿಸುತ್ತಿದ್ದರು ಮತ್ತು ನನ್ನ ಜೀವನ  ಮೌಲ್ಯಯುತವಾಗಿರುವಂತೆ ನೋಡಿಕೊಂಡರು. ಅವರು ಮನುಷ್ಯ ರೂಪದಲ್ಲಿ ಇದ್ದ ದೇವರಾಗಿದ್ದರು. ಅವರು ನನಗ್ಗೆ ಹಬ್ಬದ ರೀತಿ. ನಿತ್ಯವೂ ಆಚರಿಸುತ್ತಿದ್ದೆ. ಅವರು ನನ್ನ ಗುರು, ನನ್ನ ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟರು. ಅವರು ಈಗ ಸುಂದರ ನೆನಪು ಮಾತ್ರ’ ಎಂದು ಪತ್ರ ಆರಂಭಿಸಿದ್ದಾರೆ ಸುದೀಪ್.

ಇದೀಗ ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಏನಾಯಿತು ಎಂಬುದರ ಕುರಿತು ನನಗೆ ಬರೆಯಲು ಸಾಧ್ಯವಾಗುತ್ತಿಲ್ಲ. 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು’ ಎಂದು ಸುದೀಪ್ ಭಾವುಕರಾಗಿ ಬರೆದುಕೊಂಡಿದ್ದಾರೆ.

‘ಪ್ರತಿದಿನ ನನ್ನ ಫೋನ್‌ಗೆ ಬೆಳಿಗ್ಗೆ 5.30ಕ್ಕೆ ಶುಭೋದಯ ಕಂದಾ ಎಂಬ ಸಂದೇಶ ಬರುತ್ತಿತ್ತು. ಅಕ್ಟೋಬರ್ 18 ಶುಕ್ರವಾರದಂದು ಅವರು ನನಗೆ ಮೆಸೇಜ್ ಮಾಡಿದ್ದೇ ಕೊನೆ. ನಾನು ಬಿಗ್ ಬಾಸ್​ನಲ್ಲಿ ಇದ್ದಿದ್ದರಿಂದ ಅವರ ಮೆಸೇಜ್ ನೋಡಲು ಸಾಧ್ಯವಾಗಿರಲಿಲ್ಲ. ನಾನು ನನ್ನ ತಾಯಿಗೆ ಬೆಳಗಿನ ಮೆಸೇಜ್ ಕಳುಹಿಸಿದೆ ಮತ್ತು ಎಲ್ಲವೂ ಓಕೆ ಎಂದು ಫೋನ್ ಮಾಡಬೇಕೆಂದುಕೊಂಡೆ. ಆದರೆ, ಬಿಗ್ ಬಾಸ್​ನ ಶನಿವಾರದ ಸಂಚಿಕೆಯ ಚರ್ಚೆ ಸಮಯವನ್ನು ತಿಂದಿತು. ನಾನು ವೇದಿಕೆಗೆ ಹೋಗುವ ಮುನ್ನವೇ, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನನಗೆ ಕರೆ ಬಂದಿತು. ನಾನು ತಕ್ಷಣ ಆಸ್ಪತ್ರೆಯಲ್ಲಿದ್ದ ನನ್ನ ತಂಗಿಗೆ ಕರೆ ಮಾಡಿ, ವೈದ್ಯರೊಂದಿಗೆ ಮಾತನಾಡಿ ವೇದಿಕೆಗೆ ಹೋದೆ’ ಎಂದು ಸುದೀಪ್ ಅಂದಿನ ಘಟನೆ ವಿವರಿಸಿದ್ದಾರೆ.

‘ನಾನು ಬಿಗ್ ಬಾಸ್ ವೇದಿಕೆ ಮೇಲೆ ಇದ್ದಾಗಲೇ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂಬ ಸಂದೇಶ ಬಂತು. ಈ ಅಸಹಾಯಕತೆ ನಾನು ಮೊದಲ ಬಾರಿಗೆ ಅನುಭವಿಸಿದೆ. ಇತ್ತ ನಾನು ಶನಿವಾರದ ಸಂಚಿಕೆಯನ್ನು ನಿರ್ವಹಿಸುತ್ತಿದ್ದೇನೆ. ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೇನೆ. ಮತ್ತೊಂದೆಡೆ ನನ್ನ ತಾಯಿಯ ಬಗ್ಗೆ ಮನಸ್ಸಿನಲ್ಲಿ ಭಯ ಕಾಡುತ್ತಿತ್ತು’ ಎಂದಿದ್ದಾರೆ ಸುದೀಪ್.

‘ನಾವು ಒಪ್ಪಿಕೊಂಡ ಕೆಲಸವನ್ನು ಮಾಡಬೇಕು ಎಂದು ಅಮ್ಮನೇ ಹೇಳಿಕೊಟ್ಟಿದ್ದರು. ಅದನ್ನೇ ಮಾಡಿದೆ. ನನಗೆ ಇದನ್ನು ಕಲಿಸಿದ್ದಕ್ಕಾಗಿ ನನ್ನ ತಾಯಿಗೆ ಋಣಿಯಾಗಿದ್ದೇನೆ. ಶನಿವಾರದ ಸಂಚಿಕೆ ಚಿತ್ರೀಕರಣದ ನಂತರ ನಾನು ಆಸ್ಪತ್ರೆಗೆ ಧಾವಿಸಿದೆ.  ನನ್ನ ತಾಯಿಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ನನ್ನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದರು. ಅದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಭಾನುವಾರ ಅವರು ಮೃತಪಟ್ಟರು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಯಿತು’ ಎಂದಿದ್ದಾರೆ ಸುದೀಪ್.

ನಾನು ಶೂಟಿಂಗ್‌ಗೆ ಹೊರಡುವ ಮುನ್ನ ಬಿಗಿಯಾದ ಅಪ್ಪುಗೆಯನ್ನು ನೀಡಿದ ನನ್ನ ತಾಯಿ ಮುಂದಿನ ಕೆಲವೇ ಗಂಟೆಗಳಲ್ಲಿ ಇಲ್ಲ. ಅವರಿಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಮೆಸೇಜ್ ಹಾಗೂ ಟ್ವೀಟ್‌ಗಳ ಮೂಲಕ ನನ್ನ ಸಂತೈಸಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ಕಿಚ್ಚ.

‘ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಕಳೆದು ಹೋಗಿದೆ. ಶಾಂತಿ ತುಂಬಿದ ಸ್ಥಳವನ್ನು ಅವರು ತಲುಪಿದ್ದಾರೆ ಎಂದು ನನಗೆ ಅನಿಸುತ್ತಿದೆ. ಅಮ್ಮಾ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಪತ್ರ ಕೊನೆಗೊಳಿಸಿದ್ದಾರೆ ಸುದೀಪ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!