ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರೋಧ ಪಕ್ಷಗಳ ಒಕ್ಕೂಟ ‘I.N.D.I.A’ ಹೆಸರಿಟ್ಟುಕೊಂಡದಕ್ಕೆ ದೆಹಲಿ ಹೈಕೋರ್ಟ್ 26 ಪಕ್ಷಗಳಿಗೂ ನೋಟಿಸ್ ನೀಡಿದೆ.
ವಿಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A’ ಹೆಸರಿಟ್ಟಿದ್ದಕ್ಕೆ ಬೆಂಗಳೂರಿನ ಗಿರೀಶ್ ಭಾರಧ್ವಾಜ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ವಿಪಕ್ಷಗಳ ಒಕ್ಕೂಟಕ್ಕೆ ನೋಟಿಸ್ ನೀಡಿದೆ. ಅಲ್ಲದೆ, ಈ ಸಂಬಂಧ ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೂ ನೋಟಿಸ್ ನೀಡಿದೆ.
ಭಾರಧ್ವಾಜ್ ಪರ ವಕೀಲ ಅರುಣ್ ಶ್ಯಾಮ್ ವಾದ ಮಾಡಿದ್ದು, ವಿಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A’ ಹೆಸರು, ಧ್ವಜ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರಣೆಯನ್ನು ದೆಹಲ ಹೈಕೋರ್ಟ್ ಅಕ್ಟೋಬರ್‌ಗೆ ಮುಂದೂಡಿದ್ದು, ಪ್ರತಿವಾದಿಗಳಿಗೆ ಉತ್ತರ ನೀಡುವಂತೆ ಕೋರ್ಟ್ ನೋಟಿಸ್‌ನಲ್ಲಿ ಸೂಚನೆ ನೀಡಿದೆ.ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೂ ಉತ್ತರಿಸುವಂತೆ ಹೇಳಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನಗತ್ಯ ಪ್ರಯೋಜನ ಪಡೆಯಲು ಹಾಗೂ ಜನರ ಸಹಾನುಭೂತಿ ಪಡೆಯಲು ‘I.N.D.I.A’ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಇಂಡಿಯನ್ ನ್ಯಾಷನಲ್ ಎಂಬ್ಲೆಮ್ ಅನ್ನು ವೃತ್ತಿ ವ್ಯಾಪಾರ ಹಾಗೂ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಆದರೂ ಮಿತ್ರಪಕ್ಷಗಳು ಕಾನೂನು ಉಲ್ಲಂಘಿಸಿ ‘I.N.D.I.A’ ಹೆಸರಿನ ದುರ್ಬಳಕೆ ಮಾಡಿಕೊಳ್ಳುತ್ತಿವೆ. ‘I.N.D.I.A’ ಹೆಸರು ದುರ್ಬಳಕೆ ಮಾಡಿಕೊಂಡ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಹಾಗೂ ‘I.N.D.I.A’ ಹೆಸರು ಬಳಕೆಗೆ ನಿರ್ಬಂಧ ಹೇರುವಂತೆ ವಕೀಲ ಅರುಣ್ ಶಾಮ್ ವಾದಿಸಿದರು.
ವಿಚಾರಣೆಯನ್ನು ಅಕ್ಟೋಬರ್ 31 ಕ್ಕೆ ಮುಂದೂಡಿತು.