ಸಂತೋಷ್ ಆತ್ಮಹತ್ಯೆ ಸೂಕ್ತ ತನಿಖೆ ಮಾಡಿ ಎಂದು ನಾನೂ ಆಗ್ರಹಿಸುತ್ತೇನೆ: ಸಚಿವ ಕೆ.ಎಸ್.ಈಶ್ವರಪ್ಪ

ಹೊಸ ದಿಗಂತ ವರದಿ,ಮೈಸೂರು:

ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಬರೆದಿದ್ದಾನೆ ಎನ್ನಲಾದ ಡೆತ್ ನೋಟ್‌ನಲ್ಲಿ ಆತನ ಸಹಿಯೇ ಇಲ್ಲ. ಅಲ್ಲದೇ ವಾಟ್ಸಾಪ್‌ನಲ್ಲಿ ಮಾತ್ರ ನನ್ನ ವಿರುದ್ಧ ಟೈಪ್ ಮಾಡಿದ ಆರೋಪಳು ಮಾತ್ರ ಇದೆ. ಹಾಗಾಗಿ ಈ ಪ್ರಕರಣದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಬೇಕೆಂದು ನಾನೂ ಕೂಡ ಆಗ್ರಹಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಸಂಜೆ ನಗರದ ಲಲಿತಮಹಲ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ನನ್ನಮೇಲೆ ಶೇ 40ರಷ್ಟು ಕಮೀಷನ್ ಆರೋಪ ಮಾಡಿ, ಪಕ್ಷದ ವರಿಷ್ಠರು ಹಾಗೂ ಪ್ರಧಾನ ಮಂತ್ರಿಗಳಿಗೆ ದೂರು ನೀಡಿದ್ದರು. ಪ್ರಧಾನ ಮಂತ್ರಿಗಳ ಕಚೇರಿಯಿಂದ ನನಗೆ ತಿಳಿಯದಂತೆ ಪತ್ರವೊಂದು ನನ್ನ ಇಲಾಖೆಗೆ ಬಂದಿತ್ತು. ಅದಕ್ಕೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಇಲಾಖೆಯ ಮುಖ್ಯಸ್ಥರು ಕೂಡ ಸೂಕ್ತ ಸಮಂಜಾಯಿಷಿ, ಉತ್ತರವನ್ನು ನೀಡಿದ್ದಾರೆ. ಅದರಲ್ಲಿ ಸಂತೋಷ್‌ಗೆ ಯಾವುದೇ ಗುತ್ತಿಗೆಯನ್ನು ಇಲಾಖೆಯಿಂದ ನೀಡಿರಲಿಲ್ಲ, ಹಾಗಾಗಿ ಆತ ಮಾಡಿದ್ದ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಪಷ್ಟನೆಯನ್ನು ನೀಡಲಾಗಿತ್ತು ಎಂದು ತಿಳಿಸಿದರು.
ಡೆತ್ ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಕೊಲೆಗಡುಕರಾಗುವುದಿಲ್ಲ, ಯಾರಾದರೂ ಡೆತ್ ನೋಟ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಹೆಸರನ್ನು ಬರೆದರೆ, ಅವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುತ್ತಾರೆಯೇ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯನವರು ಹಿಜಾಬ್ ವಿಚಾರವಾಗಿ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದ್ದರು. ಬಂದ್ ಮಾಡಿಸಿದ್ದರು. ಕೋರ್ಟ್ ವಿರುದ್ಧ ಮಾತನಾಡಿದ್ದರು. ಶಿವಮೊಗ್ಗದಲ್ಲಿ ಹರ್ಷ, ಬೆಂಗಳೂರಿನಲ್ಲಿ ಚಂದ್ರ ಎಂಬ ಯುವಕರ ಕೊಲೆಯಾದಾಗ, ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಲಿಲ್ಲ. ದಕ್ಷಿಣ ಕನ್ನಡದಲ್ಲಿ 23 ಮಂದಿ ಗೋರಕ್ಷಕರ ಕೊಲೆಯಾದಾಗ, ಸಿದ್ದರಾಮಯ್ಯ ಎಷ್ಟು ಜನರಿಗೆ ಪರಿಹಾರ ನೀಡಿದರು. ಸಿದ್ದರಾಮಯ್ಯನವರಿಗೆ ನನ್ನ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆಯಿಲ್ಲ. ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ನಡೆಸಿ ವಿಫಲರಾಗಿ, ಬೊಬ್ಬೆ ಹೊಡೆಯುತ್ತಿದ್ದಾರೆ. ಅವರನ್ನು ನಾನು ಯಾವುದೇ ಲೆಕ್ಕಕ್ಕೂ ಇಟ್ಟುಕೊಂಡಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!