October 18, 2026
Sunday, October 18, 2026
spot_img

‘ನನಗೆ ನ್ಯಾಯ ಬೇಕು’: ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಗರ್ಭಿಣಿ ಪತ್ರಕರ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಭಟನೆಯ ಸಂದರ್ಭದಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆ ರಿಚಾ ಪರಾಶರ್ ಇದೀಗ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿ ಸೇರಿದಂತೆ ಘಟನೆಗೆ ಸಂಬಂಧಿಸಿದ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಈ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.

ಏನಿದು ಘಟನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇಂಡಿಯಾ ಮೈತ್ರಿಕೂಟದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಮೆರವಣಿಗೆ ನಡೆಸಿದ್ದರು. ಈ ವೇಳೆ ಸುಪ್ರೀಂ ಕೋರ್ಟ್ ಆವರಣದ ಬಳಿ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಪಡೆಯಲು ಕಾಯುತ್ತಿದ್ದಾಗ, ಅವರು ತಮ್ಮ ಕೈ ಹಿಡಿದು ಬಲವಾಗಿ ಎಳೆದರು. ಬಳಿಕ ಭದ್ರತಾ ಸಿಬ್ಬಂದಿ ತಳ್ಳಿದ ಪರಿಣಾಮ ಮೆಟ್ಟಿಲುಗಳ ಮೇಲೆ ಬಿದ್ದಿದ್ದಾಗಿ ರಿಚಾ ಆರೋಪಿಸಿದ್ದಾರೆ.

ಇದನ್ನೂ ಓದಿ:

ಪೊಲೀಸರಿಗೆ ದೂರು ಸಲ್ಲಿಕೆ

ಶನಿವಾರ ನವದೆಹಲಿ ಜಿಲ್ಲೆಯ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಪತ್ರಕರ್ತೆ, ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಘಟನೆಯ ವೇಳೆ ದುರ್ವರ್ತನೆ, ಬೆದರಿಕೆ ಹಾಗೂ ಬಲಪ್ರಯೋಗಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದ ಬಲಪ್ರಯೋಗ, ಗಾಯ ಉಂಟುಮಾಡುವುದು ಮತ್ತು ನಿರ್ಲಕ್ಷ್ಯದಿಂದ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡುವಂತಹ ಕೃತ್ಯಗಳಿಗೆ ಸಂಬಂಧಿಸಿದ ಕಾನೂನು ವಿಧಿಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಬೆದರಿಕೆ ಹಾಗೂ ಟ್ರೋಲ್‌ಗಳ ನಡುವೆಯೂ ಸತ್ಯದ ಪರ ನಿಲ್ಲುವುದಾಗಿ ಹೇಳಿದ್ದಾರೆ. ಪತ್ರಕರ್ತರಾಗಿ ಪ್ರಶ್ನಿಸುವ ಮತ್ತು ವರದಿ ಮಾಡುವ ಹಕ್ಕು ರಕ್ಷಿಸಲ್ಪಡಬೇಕು ಎಂದೂ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ನಿರಾಕರಣೆ, ಬಿಜೆಪಿಯಿಂದ ಟೀಕೆ

ಪತ್ರಕರ್ತೆಯ ಆರೋಪವನ್ನು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಪ್ರಶ್ನಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಆರೋಪಿಸಿರುವ ಘಟನೆಯ ಸಂಪೂರ್ಣ ದೃಶ್ಯ ಕಾಣಿಸುವುದಿಲ್ಲ ಎಂಬುದು ಕಾಂಗ್ರೆಸ್‌ನ ನಿಲುವಾಗಿದೆ. ಮತ್ತೊಂದೆಡೆ, ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.

https://www.instagram.com/reel/DeZhmgoSCz1/?utm_source=ig_embed&ig_rid=AahDRz9wIMOVibBQrHEGiSh

Must Read