ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ರಿಷಬ್ ಶೆಟ್ಟಿ, ತಮ್ಮ ಹೊಸ ಸಿನಿಮಾ ಕಾಂತಾರ: ಚಾಪ್ಟರ್ 1 ಕುರಿತಂತೆ ಮಾತನಾಡುವ ವೇಳೆ ತುಂಬಾ ಎಮೋಷನಲ್ ಆಗಿದ್ದರು. ಕಣ್ಣೀರನ್ನು ತಡೆದುಕೊಂಡರೂ, ಮನಸ್ಸಿನಲ್ಲಿದ್ದ ಭಾವನೆಗಳನ್ನು ಹೊರಹಾಕದೆ ಇರಲಿಲ್ಲ. ಮೂರು ವರ್ಷಗಳ ಕಾಲ ತಮ್ಮ ಕುಟುಂಬ ಸಮೇತ ಕುಂದಾಪುರದಲ್ಲಿ ವಾಸವಿದ್ದು, ಸಂಪೂರ್ಣವಾಗಿ ಈ ಚಿತ್ರದ ತಯಾರಿಕೆಗೆ ತೊಡಗಿಸಿಕೊಂಡಿದ್ದ ಅವರು, ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮೊದಲ ಬಾರಿಗೆ ತಮ್ಮ ಹೃದಯದ ಮಾತು ಹಂಚಿಕೊಂಡರು.
ರಿಷಬ್ ಶೆಟ್ಟಿ ತಮ್ಮ ಭಾಷಣದಲ್ಲಿ “ಈ ಚಿತ್ರಕ್ಕಾಗಿ ಐದು-ಆರು ಬಾರಿ ಜೀವ ಹೋಗುವ ಸ್ಥಿತಿಯನ್ನು ಎದುರಿಸಿದ್ದೆ. ದೈವ ಶಕ್ತಿ ನನ್ನನ್ನು ಕಾಪಾಡಿತು” ಎಂದು ಹೇಳಿದ್ದಾರೆ. ‘ಕಾಂತಾರ’ದಿಂದ ಹಿಡಿದು ಕಾಂತಾರ: ಚಾಪ್ಟರ್ 1 ವರೆಗೆ ಸುಮಾರು ಐದು ವರ್ಷ ಶ್ರಮಿಸಿದ ಅವರು, ನೂರಕ್ಕೆ ನೂರು ನೈಸರ್ಗಿಕ ಸನ್ನಿವೇಶಗಳಲ್ಲೇ ಚಿತ್ರೀಕರಣ ನಡೆಸಿದ್ದಾರೆ. ಯಾವುದೇ ಸೆಟ್ ಹಾಕದೆ, ನೈಜ ಸನ್ನಿವೇಶಗಳಲ್ಲೇ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.
ಈ ಹೊಸ ಅಧ್ಯಾಯದಲ್ಲಿಯೂ ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷವೇ ಕಥೆಯ ಕೇಂದ್ರಬಿಂದು. ರಿಷಬ್ ಶೆಟ್ಟಿ ತಮ್ಮ ತಂಡದೊಂದಿಗೆ ಅಧ್ಯಯನ ನಡೆಸಿ, ಪ್ರೊಫೆಸರ್‌ಗಳು ಮತ್ತು ವಿಷಯ ತಜ್ಞರೊಂದಿಗೆ ಚರ್ಚಿಸಿ ಕಥೆಯನ್ನು ಕಟ್ಟಿದ್ದಾರೆ. ದಂತಕಥೆಯ ಆಧಾರದ ಮೇಲೆ ಮೂಡಿ ಬಂದ ಈ ಚಿತ್ರವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಅವರು ಹೇಳಿದ್ದಾರೆ.
ಲೈವ್ ಲೊಕೇಷನ್‌ನಲ್ಲಿ ಕಷ್ಟಸಾಧ್ಯ ಶೂಟಿಂಗ್
ಸಿನಿಮಾವನ್ನು ನೈಸರ್ಗಿಕ ಸ್ಥಳಗಳಲ್ಲಿ ಮಾತ್ರ ಚಿತ್ರೀಕರಿಸಿದ್ದೇವೆ. ಇದು ಬಹಳ ಕಷ್ಟಕರವಾಗಿದ್ದರೂ ದೈವ ಶಕ್ತಿ ನಮ್ಮೊಂದಿಗೆ ಇತ್ತು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಸಾಹಸ ದೃಶ್ಯಗಳಲ್ಲಿ ತಮಗೆ ಎದುರಾದ ಅನೇಕ ಸವಾಲುಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಒಬ್ಬ ನಟ ಅಥವಾ ಒಬ್ಬ ನಿರ್ದೇಶಕ ಮಾತ್ರ ಸಿನಿಮಾರಂಗವನ್ನು ಉಳಿಸಲಾರನು. ಉತ್ತಮ ಕಥೆಗಳು, ಹೊಸ ಪ್ರತಿಭೆಗಳು ಬರಬೇಕು. ಜನರು ಇಷ್ಟಪಡುವ ವಿಷಯಗಳನ್ನು ತಂದುಕೊಡಬೇಕು. ಆಗಲೇ ಕನ್ನಡ ಚಿತ್ರರಂಗ ಬಲವಾಗಿ ಬೆಳೆಯುತ್ತದೆ ಎಂದು ರಿಷಬ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.