ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಹೆಸರು ಕಾಣಿಸದಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ “ಪಕ್ಷವು ಟಿಕೆಟ್ ನಿರಾಕರಿಸಿದೆ” ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ, ಅಣ್ಣಾಮಲೈ ಸ್ವತಃ ಮುಂದೆ ಬಂದು ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಾವು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ನಿರ್ಧಾರವನ್ನು ಮುಂಚಿತವಾಗಿಯೇ ಪಕ್ಷದ ಕೋರ್ ಸಮಿತಿಗೆ ಲಿಖಿತವಾಗಿ ತಿಳಿಸಿದ್ದಾಗಿ ಸ್ಪಷ್ಟಪಡಿಸಿದರು. ಹೀಗಾಗಿ ಟಿಕೆಟ್ ಸಿಗಲಿಲ್ಲ ಎಂಬ ಮಾತುಗಳಿಗೆ ಯಾವುದೇ ಆಧಾರವಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ:
ಅಣ್ಣಾಮಲೈ ಅವರ ಹೇಳಿಕೆಯ ಪ್ರಕಾರ, ಸ್ಪರ್ಧಿಸದಿರುವುದು ಸಂಪೂರ್ಣವಾಗಿ ಅವರ ವೈಯಕ್ತಿಕ ಮತ್ತು ರಾಜಕೀಯ ತೀರ್ಮಾನ. “ನಾನು ಸ್ಪರ್ಧಿಸಲು ಇಚ್ಛಿಸದಿದ್ದಾಗ ಪಕ್ಷದ ನಾಯಕತ್ವವು ನನಗೆ ಟಿಕೆಟ್ ಹೇಗೆ ಕೊಡುತ್ತದೆ?” ಎಂದು ಅವರು ಪ್ರಶ್ನಿಸಿದರು.
ತಮ್ಮ ಮುಖ್ಯ ಗುರಿ ಈಗ ರಾಜ್ಯಾದ್ಯಂತ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದು ಎಂದು ತಿಳಿಸಿದ್ದಾರೆ. ಪಕ್ಷದ ಕೇಂದ್ರ ನಾಯಕತ್ವವು ತಮ್ಮ ನಿರ್ಧಾರವನ್ನು ಗೌರವಿಸಿರುವುದಕ್ಕೆ ಧನ್ಯವಾದ ತಿಳಿಸಿ, ರಾಜ್ಯದ ಎಲ್ಲಾ ಮೈತ್ರಿ ಅಭ್ಯರ್ಥಿಗಳಿಗೆ ಸಕ್ರಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.



