ಭಾರತ- ಪಾಕ್​ ಕದನ ನಿಲ್ಲಿಸಿದ್ದು ನಾನೇ: ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಟ್ರಂಪ್ ವಾದ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಾನೇ ನಿಲ್ಲಿಸಿದ್ದು ಎಂದು ಹೇಳಿಕೊಂಡಿದ್ದಾರೆ.

ಪಹಲ್ಗಾಮ್​ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್​ ಸಿಂದೂರ ಕಾರ್ಯಾಚರಣೆ ಬಳಿಕ ಕದನ ವಿರಾಮಕ್ಕೆ ಪಾಕ್ ಯಾಚಿಸಿತ್ತು. ಹೀಗಾಗಿ, ನಾವು ಕಾರ್ಯಾಚರಣೆ ನಿಲ್ಲಿಸಿದೆವು ಎಂದು ಭಾರತ ಅಮೆರಿಕದ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿತ್ತು.

ಆದಾಗ್ಯೂ, ತನ್ನ ಹಳೆ ಚಾಳಿಯನ್ನು ಬಿಡಲೊಲ್ಲದ ಟ್ರಂಪ್​​, ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ನಿಂತಿದ್ದು ತನ್ನಿಂದಲೇ. ಈ ಕದನ ನಿಲ್ಲಿಸದಿದ್ದರೆ ಅಮೆರಿಕದೊಂದಿಗಿನ ನಿಮ್ಮೆಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದೆ. ಹೀಗಾಗಿ, ಇಬ್ಬರೂ ಕದನ ನಿಲ್ಲಿಸಿದರು ಎಂದು ಹಿಂದಿನ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

ಶ್ವೇತಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,ನಾನು ಒಂದಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಅದರಲ್ಲಿ ಪಾಕಿಸ್ತಾನ- ಭಾರತ ಕದನ ನಿಲ್ಲಿಸಿದ್ದು ಒಂದಾಗಿದೆ. ಇಂತಹ ಹಲವು ಸಂಘರ್ಷಗಳನ್ನು ತಡೆದಿದ್ದೇನೆ ಎಂದು ಹೇಳಿದ್ದಾರೆ.

ನಾನು ವ್ಯಾಪಾರವನ್ನು ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದೆ. ಕದನ ಮುಂದುವರಿದಲ್ಲಿ ಪರಮಾಣು ದಾಳಿ ನಡೆಯುವ ಸಾಧ್ಯತೆ ಇತ್ತು. ಸಂಘರ್ಷ ಮುಂದುವರಿಸಿದ್ದೇ ಆದಲ್ಲಿ, ನಿಮ್ಮೊಂದಿಗಿನ ಎಲ್ಲ ವ್ಯಾಪಾರ ವಹಿವಾಟುಗಳನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೆ ಎಂದು ಪುನರುಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೆ ಸೆರ್ಬಿಯಾ ಮತ್ತು ಕೊಸೊವೊ ಯುದ್ಧವನ್ನೂ ನಿಲ್ಲಿಸಿದ್ದೇನೆ. ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ದೊಡ್ಡ ಯುದ್ಧವಾಗಿ ಪರಿವರ್ತನೆ ಆಗುವ ಸಂಭವವಿತ್ತು. ಅವರಿಗೂ ವ್ಯಾಪಾರದ ಬೆದರಿಕೆ ಒಡ್ಡಿದ್ದರಿಂದ ಉಭಯ ದೇಶಗಳು ತಮ್ಮ ಸಂಘರ್ಷ ನಿಲ್ಲಿಸಿದವು ಎಂದು ಹೇಳಿಕೊಂಡಿದ್ದಾರೆ.

ಪಹಲ್ಗಾಮ್​ ಉಗ್ರ ದಾಳಿ ಬಳಿಕ ನಡೆದ ಸಂಘರ್ಷದಲ್ಲಿ ಪಾಕಿಸ್ತಾನ ನಾಶವಾಗುವ ಭಯದಲ್ಲಿ ಕದನ ವಿರಾಮಕ್ಕೆ ಗೋಗರೆದಿತ್ತು. ಆ ದೇಶವೇ ಮೊದಲು ಕದನ ನಿಲುಗಡೆ ಬಯಸಿತ್ತು. ಉಭಯ ದೇಶಗಳ ಡಿಜಿಎಂಒಗಳು ಮಾತುಕತೆ ನಡೆಸಿದ ಬಳಿಕ ಸಂಘರ್ಷ ನಿಲ್ಲಿಸಿದ್ದೆವು. ಇದರಲ್ಲಿ ಅಮೆರಿಕದ ಮಧ್ಯಸ್ಥಿಕೆ ಇರಲಿಲ್ಲ ಎಂದು ಭಾರತ ಹೇಳಿದೆ.

ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕರೆ ಮಾಡಿ ಸ್ಪಷ್ಟನೆ ನೀಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!