ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಲಾಸ್ಕಾದ ಆಂಕಾರೇಜ್‌ನಲ್ಲಿ ಪುಟಿನ್ ಅವರೊಂದಿಗೆ ನಡೆದ ಉನ್ನತ ಮಟ್ಟದ ಶೃಂಗಸಭೆಯ ಬಳಿಕ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಭಾರತ, ಪಾಕಿಸ್ತಾನ ಯುದ್ಧ ಸೇರಿದಂತೆ ನಾನು ಐದು ಯುದ್ಧಗಳನ್ನು ಅವುಗಳ ಅಂತ್ಯದವರೆಗೆ ಮಾತುಕತೆ ನಡೆಸಿದ್ದೇನೆ ಮತ್ತು ಆ ಯುದ್ಧಗಳು ಕಠಿಣವಾಗಿದ್ದವು ಎಂದು ಹೇಳಿದ್ದಾರೆ.
ಈ ಮಧ್ಯೆ, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಯಾವುದೇ ಒಪ್ಪಂದವಿಲ್ಲದೆ ಉಭಯ ನಾಯಕರ ನಡುವಿನ ಸಭೆ ಅಂತ್ಯಗೊಂಡಿದೆ.
ಅದೇ ಸಂದರ್ಶನದಲ್ಲಿ, ಟ್ರಂಪ್ ಮತ್ತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಪ್ಪಿಸಿದ್ದು ತಾವೇ ಎಂದು ಹೇಳಿದ್ದು, ಜೊತೆಗೆ ಕಾಂಗೋ ಮತ್ತು ರುವಾಂಡಾ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಡುವಿನ ಸಂಘರ್ಷವನ್ನು ಪರಿಹರಿಸಿರುವುದಾಗಿ ಹೇಳಿಕೊಂಡಿದ್ದಾರೆ.
ನೀವು ಭಾರತ ಮತ್ತು ಪಾಕಿಸ್ತಾನವನ್ನು ಒಮ್ಮೆ ನೋಡಿ. ಅವರು ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದ್ದರು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದ್ದವು. ಅವರು ಪರಮಾಣು ಯುದ್ಧಕ್ಕೂ ಮುಂದಾಗಿದ್ದರು. ಆದರೆ ನಾನು ಸಮಸ್ಯೆಯನ್ನು ಬಗೆಹರಿಸಿದೆನು ಎಂದು ಟ್ರಂಪ್ ಹೇಳಿದ್ದಾರೆ.