ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಮತ್ತೊಂದು ಅದ್ಧೂರಿ ವಿವಾಹಕ್ಕೆ ಸಜ್ಜಾಗಿದ್ದು, ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಮದುವೆಗೆ ಸಿದ್ಧತೆ ನಡೆಯುತ್ತಿದೆ.
ಇದೇ ಸೆಪ್ಟೆಂಬರ್ 23 ಮತ್ತು 24 ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಹೋಟೆಲ್ ಲೀಲಾ ಪ್ಯಾಲೆಸ್ ಮತ್ತು ಉದಯವಿಲಾಸ್ನಲ್ಲಿ ವಿವಾಹ ಶಾಸ್ತ್ರಗಳು ನಡೆಯಲಿದೆ.
ಈ ಬಗ್ಗೆ ಸಂಸದ ರಾಘವ್ ಚಡ್ಡಾ ಅವರಿಗೆ ಪ್ರಶ್ನೆ ಎದುರಾಗಿದ್ದು, ‘ಬಹಳ ಸಂತೋಷವಾಗಿದ್ದೇನೆ’ ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ತಮ್ಮ ಪ್ರೀತಿ, ಮದುವೆ ಬಗ್ಗೆ ಮಾತನಾಡಿದರು. ತಮ್ಮಿಬ್ಬರ ನಡುವೆ ಒಂದು ವಿಶೇಷವಾದ, ಅದ್ಭುತ ಸಂಬಂಧ ಬೆಳೆದಿದೆ ಎಂದು ತಿಳಿಸಿದರು. ಜೀವನದಲ್ಲಿ ಪರಿಣಿತಿ ಚೋಪ್ರಾ ಸಿಕ್ಕಿರುವುದನ್ನು ಒಂದು ದೈವಿಕ ಕೊಡುಗೆ ಎಂದು ವರ್ಣಿಸಿದರು.
ನಾವು ಭೇಟಿಯಾದೆವು. ಅದೊಂದು ಮ್ಯಾಜಿಕಲ್ ಕ್ಷಣ. ಆ ಮೀಟಿಂಗ್ ಬಹಳ ನ್ಯಾಚುರಲ್ ಆಗೇ ಇತ್ತು. ನನ್ನ ಜೀವನಕ್ಕೆ ಪರಿಣಿತಿ ಅವರನ್ನು ಕೊಟ್ಟಿದ್ದಕ್ಕಾಗಿ ಆ ಭಗವಂತನಿಗೆ ಸದಾ ಧನ್ಯವಾದ ತಿಳಿಸುತ್ತೇನೆ. ನನಗೆ ಇದೊಂದು ದೊಡ್ಡ ಆಶೀರ್ವಾದ. ನಾನು ಪರಿಣಿತಿ ಅವರನ್ನು ಜೀವನ ಸಂಗಾತಿಯಾಗಿ ಹೊಂದಿರುವುದಕ್ಕೆ ಬಹಳ ಖುಷಿಯಾಗಿದ್ದೇನೆ. ಈ ಮೊದಲೇ ತಿಳಿಸಿದಂತೆ ಅವರನ್ನು ನನಗಾಗಿ ಕೊಟ್ಟಿದ್ದಕ್ಕೆ ಆ ದೇವರಲ್ಲಿ ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.