ಮಾಫಿಯಾದವರನ್ನು ಹೂತು ಹಾಕ್ತೇನೆ: ಯುಪಿ ವಿಧಾನಸಭೆಯಲ್ಲಿ ಗುಡುಗಿದ ಸಿಎಂ ಯೋಗಿ ಆದಿತ್ಯನಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೊದಲ ಬಾರಿಗೆ ಅಬ್ಬರಿಸಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಟೀಕೆ ಹಾಗೂ ಆರೋಪಗಳಿಗೆ ಉಗ್ರ ರೂಪದಲ್ಲಿ ಉತ್ತರ ನೀಡಿದರು.

2005ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕನ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಉಮೇಶ್‌ ಪಾಲ್‌ರನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಈ ಕುರಿತು ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸಿದ ಅಖಿಲೇಶ್‌ ಯಾದವ್‌ಗೆ ಖಡಕ್ ಆಗಿ ಉತ್ತರ ನೀಡಿದ ಯೋಗಿ ಆದಿತ್ಯನಾಥ್‌, ‘ಮಾಫಿಯೋಂ ಕೋ ಮಿಟ್ಟಿ ಮೇ ಮಲಾ ದೇಂಗೆ.. (ಮಾಫಿಯಾದವರನ್ನು ಮಣ್ಣಲ್ಲಿ ಹೂತು ಹಾಕ್ತೇನೆ)’ ಎಂದು ಅಬ್ಬರಿಸಿದರು.

ನಾನು ಇಂದು ಈ ಸದನಕ್ಕೆ ಹೇಳುತ್ತಿದ್ದೇನೆ, ಅಂಡರ್‌ವರ್ಲ್ಡ್‌, ಮಾಫಿಯಾದ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಪುನರುಚ್ಛರಿಸಿದರು. ಇನ್ನೊಂದೆಡೆ ಸಮಾಜವಾದಿ ಪಕ್ಷ (ಎಸ್‌ಪಿ) ಅಪರಾಧಿಗಳು, ರೌಡಿಗಳು ಹಾಗೂ ಕ್ರಿಮಿನಲ್‌ ಹಿನ್ನಲೆ ಹೊಂದಿರುವವರನ್ನು ಪೋಷಣೆ ಮಾಡುವಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.

ಪ್ರಯಾಗ್‌ರಾಜ್ ಘಟನೆಯ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಕ್ರಿಮಿನಲ್‌ ವ್ಯಕ್ತಿಯನ್ನು ಸಮಾಜವಾದಿ ಪಕ್ಷವೇ ಪೋಷಣೆ ಮಾಡುತ್ತಿದೆ. ಅವರನ್ನು ಸಂಸದರನ್ನಾಗಿ ಮಾಡಿದ್ದು ಎಸ್‌ಪಿ. ಆದ್ರೆ ನೀವೇನೇ ಮಾಡಿಕೊಳ್ಳಿ ಈ ಮಾಫಿಯಾದವರನ್ನು ನಾವು ಬಿಡೋ ಮಾತೇ ಇಲ್ಲ ಎಂದು ಗುಡುಗಿದರು.

ರಾಮ ರಾಜ್ಯದಲ್ಲಿ ಪೊಲೀಸರು ಸಂಪೂರ್ಣ ವೈಫಲ್ಯವಾಗಿದ್ದಾರೆ ಎಂದು ಆರೋಪಿಸಿದ್ದರು. ಹಗಲು ಗುಂಡಿನ ದಾಳಿ ನಡೆಯುತ್ತಿದೆ, ಬಾಂಬ್‌ಗಳನ್ನು ಎಸೆಯಲಾಗುತ್ತಿದೆ ಮತ್ತು ಒಬ್ಬ ಸಾಕ್ಷಿಯನ್ನು ಕೊಲ್ಲಲಾಗಿದೆ. ಪೊಲೀಸರು ಏನು ಮಾಡುತ್ತಿದ್ದಾರೆ? ಸರ್ಕಾರ ಏನು ಮಾಡುತ್ತಿದೆ? ಡಬಲ್ ಇಂಜಿನ್‌ ಸರ್ಕಾರ ಎಲ್ಲಿವೆ? ಇದು ಚಲನಚಿತ್ರ ಶೂಟಿಂಗ್ ಆಗಿದೆಯೇ ಎಂದು ಅಖಿಲೇಶ್ ಯಾದವ್ ಕೇಳಿದರು.
ತಿರುಗೇಟು ಕೊಟ್ಟ ಯೋಗಿ, ಶರಮ್ ತೋ ತುಮ್ಹೇ ಕರ್ನಿ ಚಾಹಿಯೇ, ಅಪ್ನೆ ಬಾಪ್ ಕಿ ಸಮ್ಮಾನ್ ನಹೀ ಕರ್ ಪಾಯೇ ತುಮ್ (ನಿಮಗೆ ನಾಚಿಕೆಯಾಗಬೇಕು, ನಿಮ್ಮ ತಂದೆಯನ್ನು ಸಹ ನೀವು ಗೌರವಿಸಲು ಸಾಧ್ಯವಿಲ್ಲ) ಎಂದು ಹೇಳಿದರು.

2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಅವರನ್ನು ಶುಕ್ರವಾರ ಪ್ರಯಾಗ್‌ರಾಜ್‌ನಲ್ಲಿರುವ ಅವರ ನಿವಾಸದ ಹೊರಗೆ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪಾಲ್ ತನ್ನ ಮನೆಯ ಮುಂದೆ ತನ್ನ ವಾಹನದಿಂದ ಇಳಿದ ತಕ್ಷಣ ದಾಳಿಕೋರರು ದಾಳಿ ಮಾಡಿದರು. ಗುಂಡೇಟಿನ ದಾಳಿಯಲ್ಲಿ ಅಂಗರಕ್ಷಕರಿಗೂ ಗುಂಡು ತಗುಲಿದೆ. ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಉಮೇಶ್‌ ಪಾಲ್‌ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವು ಕಂಡಿದ್ದರು. ತೀವ್ರವಾಗಿ ಗಾಯಗೊಂಡ ಉಮೇಶ್ ಪಾಲ್ ಅವರನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದನ ಪುತ್ರನೊಂದಿಗೆ 14 ಮಂದಿಯನ್ನು ಪ್ರಯಾಗ್‌ರಾಜ್‌ ಪೊಲೀಸರು ಬಂಧಿಸಿದ್ದಾರೆ. 2005ರಲ್ಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಕಿರಿಯ ಸಹೋದರ ಖಾಲಿದ್ ಅಜೀಂ ಅವರನ್ನು ಸೋಲಿಸುವ ಮೂಲಕ ಅಲಹಾಬಾದ್ (ಪಶ್ಚಿಮ) ವಿಧಾನಸಭಾ ಸ್ಥಾನವನ್ನು ರಾಜು ಪಾಲ್‌ ಗೆದ್ದಿದ್ದರು. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಕಂಡಿದ್ದ ರಾಜು ಪಾಲ್‌, ನಂತರ ಕೆಲವೇ ತಿಂಗಳಲ್ಲಿ ಕೊಲೆಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!