ರಾಘವೇಂದ್ರನನ್ನು ಸೋಲಿಸಿಯೇ ಸೋಲಿಸುತ್ತೇನೆ, ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ: ಈಶ್ವರಪ್ಪ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸಿಯೇ ಸೋಲಿಸುತ್ತೇನೆ. ನಾನು ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಸ್ಪರ್ಧೆ ಮಾಡಿಯೇ ಮಾಡ್ತೇನೆ. ಪಕ್ಷ ಉಳಿಯಬೇಕು, ಹಿಂದುತ್ವ ಉಳಿಯಬೇಕು ಅದಕ್ಕಾಗಿ ನನ್ನ ಸ್ಪರ್ಧೆ ಎಂದು ಮಾಜಿ ಸಚಿವ, ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿಕಾರಿಪುರದಲ್ಲಿ ಇಂದು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ 6 ತಿಂಗಳು ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಯಾಕೆ ಅರ್ಹತೆ ಇದ್ದವರು ರಾಜ್ಯದಲ್ಲಿ ಯಾರೂ ಇರಲಿಲ್ವಾ? ಲಿಂಗಾಯ್ತರಿಗೆ ಕೊಡಬೇಕಾ? ಹಿಂದು ಹುಲಿ ಯತ್ನಾಳ್ ‌ಇದ್ದರು. ಸಿ.ಟಿ.ರವಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಗೋವಾ, ಮುಂಬೈ, ತಮಿಳುನಾಡು ಉಸ್ತುವಾರಿ ಆಗಿದ್ದರು. ಸಿ.ಟಿ.ರವಿ ಅವರನ್ನು ಅಧ್ಯಕ್ಷರಾಗಿ ಮಾಡಬಹುದಿತ್ತು. ಸಂಸದ ಪ್ರತಾಪ್ ಸಿಂಹ ಇದ್ದರು. ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಯಾಕೆ ಮಾಡಲಿಲ್ಲ. ಒಂದೇ ಕುಟುಂಬದವರೇ ಅಧ್ಯಕ್ಷರಾಗಬೇಕೆಂಬ ನಿಯಮವಿದೆಯೇನು? ಹಾಗಾದರೆ ಕಾಂಗ್ರೆಸ್ ಸಂಸ್ಕೃತಿಗೂ ರಾಜ್ಯ ಬಿಜೆಪಿಗೂ ಏನು ವ್ಯತ್ಯಾಸ ಇದೆ ಎಂದು ಪ್ರಶ್ನಿಸಿದರು.

ಶಿಕಾರಿಪುರದಲ್ಲಿ ಇಷ್ಟೊಂದು ಜನ ಸೇರಿದ್ದಾರೆ. ಈ ದೃಶ್ಯವನ್ನು ನಾನು ಜೀವನದಲ್ಲಿ ಮರೆಯೊಲ್ಲ. ಸಿಟಿ ರವಿ, ಸದಾನಂದಗೌಡ, ಅನಂತಕುಮಾರ ಹೆಗ್ಡೆ, ಯತ್ನಾಳ್, ಈಶ್ವರಪ್ಪ ನವರು ಹಿಂದು ಹುಲಿಗಳು. ಈ ಹಿಂದು ಹುಲಿಗಳು ಬೆಳೆಯಬಾರದು. ಹಿಂದು ಹುಲಿಗಳು ಬೆಳೆದರೆ ಅವರ ಮುಖ್ಯಮಂತ್ರಿ ಆಗೊಲ್ಲ. ಅದಕ್ಕಾಗಿ ನಮ್ಮನ್ನು ಪಕ್ಕಕ್ಕೆ ಸರಿಸಿದರು. ಶಿಕಾರಿಪುರದಲ್ಲಿ ಅನೇಕ ಕಾರ್ಯಕರ್ತರು ನೋವು ಅನುಭವಿಸಿದ್ದಾರೆ. ಆದರೆ ಮುಂದೆ ಬಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದರು.

ನರೇಂದ್ರ ಮೋದಿಯವರು ಯುವಕರು ಬೆಳೆಯಬೇಕು ಅಂತಾರೆ. ಯುವಕರನ್ನು ತುಳಿಯುವುದೇ ಯಡಿಯೂರಪ್ಪನ ಕೆಲಸ. ವಿಜಯೇಂದ್ರ ಶಿಕಾರಿಪುರದಲ್ಲಿ ಗೆದ್ದರು. ಹೇಗೆ ಗೆದ್ದರು? ಚುನಾವಣೆಯಲ್ಲಿ ಕಾಂಗ್ರೆಸ್‌ನವರ ಜೊತತೆ ಹೊಂದಾಣಿಕೆ ಮಾಡಿಕೊಂಡು ಗೆದ್ದರು. ವರುಣದಲ್ಲಿ ಸಿದ್ದರಾಮಯ್ಯ ಗೆದ್ದರೂ ಪರವಾಗಿ ಇಲ್ಲ, ಶಿಕಾರಿಪುರದಲ್ಲಿ ವಿಜಯೇಂದ್ರ ಗೆಲ್ಲಬೇಕಾಗಿತ್ತು. ಹೀಗಾಗಿ ಡಮ್ಮಿ ಅಭ್ಯರ್ಥಿ ಹಾಕಿಕೊಂಡರು. ಈಗ ರಾಘವೇಂದ್ರ ಗೆಲ್ಲಬೇಕು ಅಂತಾ ಶಿವಮೊಗ್ಗದಲ್ಲಿ ಡಮ್ಮಿ ಕ್ಯಾಂಡಿಡೇಟು ಹಾಕಿಕೊಂಡಿದ್ದಾರೆ ಅಂತಾ ಜನ ಮಾತಾಡ್ತಾ ಇದ್ದಾರೆ. ಯಡಿಯೂರಪ್ಪ ದುಡ್ಡಿನ ಮೂಲಕ ರಾಜಕಾರಣ ಮಾಡ್ತಿದ್ದಾರೆ. ಶಿಕಾರಿಪುರದ ಜನರು ಕುರಿಗಳೆಂದು ಭಾವಿಸಿದ್ದಾರೆ. ಈ ಬಾರಿ ನೀವು ಅವರಿಗೆ ಬುದ್ಧಿ ಕಲಿಸಬೇಕು. ರಾಘವೇಂದ್ರ ಅವರನ್ನು ಸೋಲಿಸಬೇಕು. ಸೋಲಿನ ರುಚಿ ಏನು ಅಂತಾ ಗೊತ್ತು ಮಾಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!