ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 5 ವರ್ಷದಲ್ಲಿ ಬಿಜೆಪಿ ಜೊತೆಗೆ ಸೇರಿ ಸರ್ಕಾರ ಮಾಡುತ್ತೇನೆ. ಆಗ ನಾವು ರಾಮರಾಜ್ಯದ ಸರ್ಕಾರ ಮಾಡಬಹುದು. ನಾನು ರಾಮರಾಜ್ಯ ಮಾಡದಿದ್ದರೆ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು ನಗರದ ಸಾ.ರಾ.ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ, ಜೆಡಿಎಸ್ ಸರ್ಕಾರ ತಪ್ಪಿಸಲು ಸಾಧ್ಯವಿಲ್ಲ. 2028ಕ್ಕೆ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆಸ್ನವರು ಹೇಳುತ್ತಾರೆ. 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೇ ಅಂತಿಮವಲ್ಲ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. 18 ಶಾಸಕರನ್ನು ಕರೆದೊಯ್ದಿದ್ದ ವೇಳೆ ಬಿಜೆಪಿ 17 ಸ್ಥಾನದಲ್ಲಿ ಗೆದ್ದಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆದರು ಎಂದು ಪ್ರಶ್ನಿಸಿದ್ದಾರೆ.
2023ರಲ್ಲಿ ಬಿಜೆಪಿಗೆ ಆದ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೂ ಬರುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ಗೆ ಉತ್ತಮ ಭವಿಷ್ಯವಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತ. ಹೆಚ್ಡಿಕೆ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ನವರೇ ಅವಕಾಶ ಮಾಡಿಕೊಡ್ತಾರೆ ಎಂದು ಹೇಳಿದ್ದಾರೆ.