ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ರಾಮನ ಮಾರ್ಗ ಅನುಸರಿಸಲ್ಲ, ಆದರೆ ನಾನು ಮೂವರು ಹೆಂಡತಿಯರನ್ನು ಹೊಂದಿದ್ದ ರಾಮನ ತಂದೆ ದಶರಥನನ್ನು ಅನುಸರಿಸುತ್ತೇನೆ ಎಂದು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಹೇಳಿದರು.
ತಮ್ಮ ಮುಂಬರುವ ಚಿತ್ರ ‘ಥಗ್ ಲೈಫ್’ (Thug Life) ಪ್ರಚಾರದಲ್ಲಿ ತೊಡಗಿರುವ ನಟ ಕಮಲ್ ಹಾಸನ್ ತಮ್ಮ ಮದುವೆಗೆ ಸಂಬಂಧಿಸಿ ಅವರು ಕೇಳಿದ ಪ್ರಶ್ನೆಗೆ ತಾವು ನೀಡಿದ ಉತ್ತರವನ್ನು ಈ ಸಂದರ್ಭ ಹಂಚಿಕೊಂಡರು.
ತಾವು ಬ್ರಾಹ್ಮಣನಾಗಿದ್ದು ರಾಮನ ಅನುಯಾಯಿಯಾಗಿದ್ದರೂ ಎರಡು ಬಾರಿ ಏಕೆ ವಿವಾಹವಾದಿರಿ ಎಂದು ಕೇಳಲಾದ ಘಟನೆಯ ನೆನಪನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಇದು ಸುಮಾರು 10–15 ವರ್ಷಗಳ ಹಿಂದೆ ನಡೆದ ಘಟನೆ. ನನ್ನ ಆಪ್ತಮಿತ್ರರಾದ ಸಂಸದ ಬ್ರಿಟಾಸ್ ಅವರು ಒಮ್ಮೆ ಕಾಲೇಜು ವಿದ್ಯಾರ್ಥಿಗಳ ಗುಂಪಿನ ಮುಂದೆ ನೀವು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದವರು. ಆದರೂ ನೀವು ಎರಡು ಬಾರಿ ಹೇಗೆ ಮದುವೆಯಾಗಿದ್ದೀರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು, ಒಳ್ಳೆಯ ಕುಟುಂಬದಿಂದ ಬಂದವರಿಗೂ ಮದುವೆಗೂ ಏನು ಸಂಬಂಧ ಎಂದು ಉತ್ತರಿಸಿದ್ದೆ.
ನಾನು ರಾಮನನ್ನು ಪ್ರಾರ್ಥಿಸುವುದರಿಂದ ನಾನು ಅವನಂತೆ ಬದುಕಬೇಕು ಎಂದು ಹೇಳಿದರು. ನಾನು ಯಾವುದೇ ದೇವರನ್ನು ಪ್ರಾರ್ಥಿಸುವುದಿಲ್ಲ ಅಥವಾ ರಾಮನ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ಆಗ ನಾನು ಅವರಿಗೆ ಸ್ಪಷ್ಟಪಡಿಸಿದೆ. ಬಹುಶಃ ನಾನು ಮೂವರು ಹೆಂಡತಿಯರನ್ನು ಹೊಂದಿದ್ದ ಅವನ ತಂದೆ ದಶರಥನನ್ನು ಅನುಸರಿಸುತ್ತೇನೆ ಎಂದು ಹೇಳಿದೆ ಎಂಬುದನ್ನು ಅವರು ನೆನಪಿಸಿಕೊಂಡರು.
ತ್ರಿಶಾ ಕೃಷ್ಣನ್, ಸಿಲಂಬರಸನ್ ಟಿ.ಆರ್. ಅವರಿಗೂ ಮದುವೆಯ ಬಗ್ಗೆ ಅವರ ದೃಷ್ಟಿಕೋನಗಳ ಬಗ್ಗೆ ಕೇಳಲಾಯಿತು. ತ್ರಿಶಾ ಅವರು ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಅದು ನಡೆದರೂ, ನಡೆಯದಿದ್ದರೂ ಪರವಾಗಿಲ್ಲ ಎಂದು ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ಹಂಚಿಕೊಂಡರು.