ತಮಿಳುನಾಡಿನ ವ್ಯವಸ್ಥೆ ಬದಲಾಗದೆ ನಾನು ಚಪ್ಪಲಿ ಧರಿಸಲ್ಲ: ಅಣ್ಣಾಮಲೈ ಶಪಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ವ್ಯವಸ್ಥೆ ಬದಲಾಗದೆ ನಾನು ಚಪ್ಪಲಿ ಧರಿಸುವುದಿಲ್ಲ ಎಂಬ ಶಪಥಕ್ಕೆ ಬದ್ಧ, ಇದು ಒಂದೂವರೆ ವರ್ಷ ಇರಬಹುದು, ಅಥವಾ 7.5 ವರ್ಷವೇ ಕಾಯಬೇಕಾಗಬಹುದು, ಅಲ್ಲಿಯವರೆಗೂ ಕಾಯುತ್ತೇನೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.

ಭಾರತ್ ಫೌಂಡೇಶನ್ ಆಯೋಜಿಸಿರುವ ಮಂಗಳೂರು ಲಿಟ್ ಫೆಸ್ಟ್‌ನ 7ನೇ ಆವೃತ್ತಿಯ ಮೊದಲ ದಿನದ ಕೊನೆಯ ಅಧಿವೇಶನದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಆಡಳಿತ ಎಂಬ ವಿಚಾರದಲ್ಲಿ ಸಂವಾದದಲ್ಲಿ ಅವರು ಮಾತನಾಡಿದರು.

ಸರಕಾರ ತಪ್ಪಿದರೆ ಜನ ಮತ್ತೆ ಅಧಿಕಾರ ನೀಡುವುದಿಲ್ಲ. ಸಿಎಂ ತಪ್ಪಿದರೂ ತೆಗೆದೆಸೆಯುತ್ತಾರೆ. ಆದರೆ, ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರೇಪ್ ವಿಚಾರದಲ್ಲಿ ವ್ಯವಸ್ಥೆಯೇ ಪೂರ್ಣ ಹದಗೆಟ್ಟಿದೆ, ಹಾಗಾಗಿ ತೀವ್ರ ವೇದನೆಗೊಳಗಾಗಿ ನಾನು ಈ ಶಪಥ ಮಾಡಿದ್ದೇನೆ ಎಂದರು.

ಆರೋಪಿ ಕೇವಲ ಆಡಳಿತ ಪಕ್ಷಕ್ಕೆ ಸೇರಿದವನು ಎಂಬ ಕಾರಣಕ್ಕೆ ಆತನ ವಿರುದ್ಧ ಎಫ್‌ಐಆರ್ ಮಾಡಲು ಹಿಂದೇಟು ಹಾಕಿದ್ದಾರೆ, ಆತ 2014ರಲ್ಲೂ ಇದೇ ರೀತಿಯ ಅಪರಾಧ ಎಸಗಿದ್ದಾನೆ, ಇತರ 18 ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ, 20ನೇ ಅಪರಾಧವಾಗಿ ಈ ರೇಪ್ ಮಾಡಿದ್ದಾನೆ, ಆದರೆ ಎಫ್‌ಐಆರ್‌ನಲ್ಲಿ ವಿದ್ಯಾರ್ಥಿನಿಯ ಹೆಸರು, ವಿಳಾಸ ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಕ್ಷುಲ್ಲಕ ಕೆಲಸ ಮಾಡಲಾಗಿದೆ. ವ್ಯವಸ್ಥೆ ಬದಲಾಗಲೇಬೇಕು, ಆಡಳಿತ ಬದಲಾಗಬೇಕು, ಅದಕ್ಕಾಗಿ ಎಷ್ಟು ವರ್ಷವೂ ಕಾಯಬಲ್ಲೆ. ತಮಿಳುನಾಡಿನಲ್ಲಿ ಒಮ್ಮೆ ಬಿಜೆಪಿ ಬಂದರೆ ಮತ್ತೆ ಜನ ಕೈಬಿಡಲ್ಲ ಎಂದರು.

ತಮಿಳುನಾಡಿನಲ್ಲಿ ಇದುವರೆಗೆ ಬಿಜೆಪಿ ಸಾಧನೆ ಹೆಚ್ಚಿಲ್ಲ, ಆದರೆ ರಾಷ್ಟ್ರೀಯತೆ ತುಂಬುವ ಕೆಲಸ ಮಾಡಿದ್ದೇವೆ, ಇತರ ರಾಜಕೀಯ ಪಕ್ಷಗಳಂತೆ ಹಣ ಹಂಚುವುದಕ್ಕೆ ಹೋಗುವುದಿಲ್ಲ, ನೈತಿಕ ಬಲದಲ್ಲಿ ಬಿಜೆಪಿ ಮುಂದೆ ಐದು ವರ್ಷ ಆಡಳಿತ ಮಾಡಲಿ, ಮತ್ತೆ ಬಿಜೆಪಿಯನ್ನೆಂದೂ ಜನ ಕೈಬಿಡುವುದಿಲ್ಲ ಎಂದು ಅಣ್ಣಾಮಲೈ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!