ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಪುರಾತನವಾದ ಮತ್ತು ಅತ್ಯಂತ ಜನಪ್ರಿಯವಾದ ಗ್ರಾಮೀಣ ಕ್ರೀಡೆ. ಕೋಣಗಳೊಂದಿಗೆ ರೈತರಿಗೆ ಅವಿನಾಭಾವ ಸಂಬಂಧ ಇದೆ. ಆದ್ದರಿಂದ ತಮ್ಮ ಮಕ್ಕಳಂತೆ ಕೋಣಗಳನ್ನು ಸಾಕುತ್ತಿದ್ದಾರೆ. ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಿ ಬೆಳೆಸುವ ಜವಬ್ಧಾರಿ ನಮ್ಮೆಲ್ಲರದ್ದಾಗಿದೆ. ಈ ಜಾನಪದ ಕಲೆಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ.ಎಲ್ಲರೂ ಒಟ್ಟು ಸೇರಿ ಕಂಬಳವನ್ನು ಉಳಿಸಿ ಬೆಳೆಸೋಣ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಶನಿವಾರ ಮಂಗಳೂರಿನ ಉಳ್ಳಾಲದ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ‘ ಲವ-ಕುಶ ಜೋಡುಕರೆ’ ನರಿಂಗಾನ ಕಂಬಳೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ತಲಾ ಐದು ಲಕ್ಷದಂತೆ ಸುಮಾರು 24 ಕಂಬಳಕ್ಕೆ ಕೊಟ್ಟು ಕಂಬಳ ಕ್ರೀಡೆಯನ್ನು ಉತ್ತೇಜಿಸುವ ಪ್ರೋತ್ಸಾಹಿಸುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಬೆಂಗಳೂರಿನ ನಗರದಲ್ಲೂ ಕಂಬಳ ನಡೆದಿದೆ. ಕಂಬಳ ಒಂದು ಜಾತ್ಯಾತೀತ ಕ್ರೀಡೆಯಾಗಿದೆ. ಕಂಬಳವನ್ನು ಸುಪ್ರೀಂ ಕೋರ್ಟ್ ನಿಷೇದ ಮಾಡಿದರೂ ನಮ್ಮ ಸರಕಾರ ಈ ನಿಷೇಧವನ್ನು ತೆರವುಗೊಳಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಶ್ರಮಿಸಿದೆ ಎಂದರು.
ನಮ್ಮ ದೇಶ ಬಹುತ್ವದ ದೇಶ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿದ್ದಾರೆ. ಎಲ್ಲರನ್ನೂ ನಾವು ಪ್ರೀತಿಸಬೇಕೇ ವಿನಃ ದ್ವೇಷಿಸಬಾರದು. ನಾವು ಯಾವತ್ತೂ ಜಾತಿ ಜಾತಿಗಳನ್ಜು ವಿಭಜಿಸುವ ಕೆಲಸ ಮಾಡದೆ ಒಟ್ಟುಗೂಡಿಸುವ ಕಾರ್ಯ ಮಾಡಬೇಕು. ನಾವೆಲ್ಲರೂ ಮೂಲಭೂತವಾಗಿ ಮನುಷ್ಯರು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಮನುಷ್ಯರು ನಾವಾಗಬೇಕು. ಅಲ್ಲದೆ ಬಡವರಿಗೆ,ಮಹಿಳೆಯರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಿಸುವ ಕಾರ್ಯ ಮಾಡಬೇಕಿದೆ ಎಂದರು.
ವಿಧಾನಸಭಾ ಅಧ್ಯಕ್ಷರು, ಕಂಬಳ ಸಮಿತಿ ಅಧ್ಯಕ್ಷರಾದ ಸ್ಪೀಕರ್ ಯು.ಟಿ.ಖಾದರ್ , ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ , ಪೌರಾಡಳಿತ ಸಚಿವರಾದ ರಹೀಂಖಾನ್, ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ರಾಜಮೋಹನ್ ಉನ್ನಿತನ್, ದ.ಕ.ಜಿಲ್ಲಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.