ಹೊಸದಿಗಂತ ಡಿಜಿಟಲ್ ಡೆಸ್ಕ್
ಐಸಿಸಿ ಟಿ20 ನೂತನ ರ್ಯಾಂಕಿಂಗ್ ಪ್ರಕಟವಾಗಿದ್ದು, ಏಷ್ಯಾಕಪ್ನಲ್ಲಿ ಚೊಚ್ಚಲ ಟಿ20 ಶತಕ ಬಾರಿಸಿದ ವಿರಾಟ್ ಕೊಹ್ಲಿ ಐಸಿಸಿ ಟಿ20 ರ್ಯಾಕಿಂಗ್ನಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಅಫ್ಘಾನ್ ವಿರುದ್ಧ ಕೇವಲ 61 ಎಸೆತಗಳಲ್ಲಿ 121 ರನ್ ಸಿಡಿಸಿದ ವಿರಾಟ್ ಕೊಹ್ಲಿ ಬರೋಬ್ಬರಿ 14 ಸ್ಥಾನ ಏರಿಕೆ ಕಂಡಿದ್ದಾರೆ.
ಏಷ್ಯಾಕಪ್ಗೂ ಮುನ್ನ ಕಳಪೆ ಫಾರ್ಮ್ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ 33 ನೇ ರ್ಯಾಂಕಿಗ್ ಪಡೆದಿದ್ದರು. ಏಷ್ಯಾಕಪ್ನಲ್ಲಿ ಅಬ್ಬರಿಸಿದ್ದ ಕಿಂಗ್ ಕೊಹ್ಲಿ ಒಂದು ಶತಕ ಸೇರಿದಂತೆ 5 ಪಂದ್ಯಗಳಿಂದ 276 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕಗಳೂ ಸೇರಿವೆ. ಈ ಭರ್ಜರಿ ಪ್ರದರ್ಶನದಿಂದ ಕೊಹ್ಲಿ 14 ಸ್ಥಾನ ಏರಿಕೆ ಪಡೆದಿದ್ದು, 15ನೇ ಸ್ಥಾನಕ್ಕೆ ತಲುಪಿದ್ದಾರೆ.
2022 ರ ಏಷ್ಯಾಕಪ್ ನಲ್ಲಿ ವಿನಾಶಕಾರಿ ಪ್ರದರ್ಶನ ತೋರಿರುವ ನಾಯಕ ಬಾಬರ್ ಅಜಮ್ ಅಗ್ರಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಬಾಬರ್, ಸೂರ್ಯಾರನ್ನು ಹಿಂದಿಕ್ಕಿ T20 ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದಾರೆ. ಬುಧವಾರ (ಸೆಪ್ಟೆಂಬರ್ 14) ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ 11ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಕೆಎಲ್ ರಾಹುಲ್ 30ರಿಂದ 23ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ. ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ (ಒಂಬತ್ತು ಸ್ಥಾನ ಮೇಲೇರಿ 41ನೇ ಸ್ಥಾನಕ್ಕೆ) ಮತ್ತು ಅಕ್ಷರ್ ಪಟೇಲ್ (14 ಸ್ಥಾನ ಮೇಲೇರಿ 57ನೇ ಸ್ಥಾನ) ಕೂಡ ಉತ್ತಮ ಸಾಧನೆ ಮಾಡಿದ್ದರೆ.