ಹಾಸನ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೇ ಎಂದು ದೇವೇಗೌಡರು ಹೇಳಿದರೆ ಒಪ್ಪುವೆ: ರೇವಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಸನ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೇ ಎಂದು ದೇವೇಗೌಡರು ಹೇಳಿದರೆ ಒಪ್ಪುವೆ. ಅವರು ನಮಗೆ ಸುಪ್ರೀಂ ನಾಯಕರು, ಅವರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧ. ನಾನು ಪಕ್ಷೇತರವಾಗಿ ನಿಲ್ಲುವೆ (Karnataka Election 2023) ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿ, ಈ ಬಾರಿಯೂ ನಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್‌ನಲ್ಲಿ ಮತ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ನಾಯಕರ ಜತೆ ಸಂಪರ್ಕ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಹಾಗೂ ನನ್ನ ಬಾಂಧವ್ಯ ಬೇರೆ. ನಾನೇಕೆ ಕಾಂಗ್ರೆಸ್ ಸೇರುವುದಕ್ಕೆ ಹೋಗಲಿ. ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಇಲ್ಲವೇ? ನಾನೇಕೆ ಕಾಂಗ್ರೆಸ್‌ಗೆ ಹೋಗಲಿ. ಹಾಸನ ಟಿಕೆಟ್ ವಿಚಾರವಾಗಿ ಯಾವ ಗೊಂದಲವೂ ಇಲ್ಲ. ನಾನು ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಹೇಳಿದರು.

ಯಾರೂ ನನ್ನ ಹಾಗೂ ಕುಮಾರಸ್ವಾಮಿ ನಡುವೆ ಜಗಳ ತಂದಿಡಲು ಸಾಧ್ಯವಿಲ್ಲ. ಏನೇ ಆದರೂ ನಾನು, ಕುಮಾರಣ್ಣ ಬೆಳಗಾಗುವುದರೊಳಗೆ ಒಂದಾಗುತ್ತೇವೆ ಎಂದು ತಿಳಿಸಿದರು.

ನಮ್ಮಲ್ಲೇ ಇದ್ದು ತಿಂದು ತೇಗಿ ಈಗ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಹುಣಸೆ ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದ ಅವರು, 30 ದಿನ ಯಾರೂ ಅಪ ಪ್ರಚಾರಕ್ಕೆ ಕಿವಿಕೊಡಬೇಡಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!