ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿ, ತಮ್ಮ ರಾಷ್ಟ್ರೀಯ ತಂಡದ ಆಯ್ಕೆ ಮತ್ತು ಭವಿಷ್ಯದ ಕುರಿತು ದಿಟ್ಟ ಹೇಳಿಕೆ ನೀಡುವ ಮೂಲಕ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಇತ್ತೀಚೆಗಷ್ಟೇ ಮತ್ತೊಬ್ಬ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಸುಮಾರು ನಾಲ್ಕು ವರುಷಗಳ ಬಿಡುವಿನ ನಂತರ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಅನಿರೀಕ್ಷಿತವಾಗಿ ಆಯ್ಕೆಯಾಗಿದ್ದರು. ಈ ಬೆನ್ನಲ್ಲೇ ಶಮಿ ಅವರಿಗೂ ಟೀಮ್ ಇಂಡಿಯಾಗೆ ಮರಳುವ ಆಶಾವಾದ ಮೂಡಿದೆಯೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಶಮಿ, “ಭುವನೇಶ್ವರ್ ಕುಮಾರ್ಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಒಳ್ಳೆಯ ವಿಷಯ. ಆದರೆ ಅವರ ಆಯ್ಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಎಲ್ಲೇ ಆಡಲು ಅವಕಾಶ ಸಿಕ್ಕರೂ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ಈ ರಣಜಿ ಪಂದ್ಯದ ಮೇಲಿದೆ” ಎಂದು ಸ್ಪಷ್ಟಪಡಿಸಿದರು.
ಕಳೆದ ಎರಡು-ಮೂರು ವರುಷಗಳಿಂದ ದೇಶಿ ಕ್ರಿಕೆಟ್ನಲ್ಲಿ ಬೆಂಗಾಲ್ ತಂಡದ ಪರ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶಮಿ, ತಮ್ಮ ದೈಹಿಕ ಫಿಟ್ನೆಸ್ ಅನ್ನು ಸಂಪೂರ್ಣವಾಗಿ ಸಾಬೀತುಪಡಿಸಿದ್ದಾರೆ. ಆದರೂ ಅವರನ್ನು ರಾಷ್ಟ್ರೀಯ ತಂಡದಿಂದ ಹೊರಗಿಡಲಾಗುತ್ತಿದೆ. ಈ ಅಸಮಾಧಾನದ ಬಗ್ಗೆ ಮಾತನಾಡುತ್ತಾ, “ಕಳೆದ ಕೆಲವು ವರುಷಗಳಿಂದ ನನ್ನ ವಿಷಯದಲ್ಲಿ ಇದೇ ನಡೆಯುತ್ತಿದೆ. ನಾನು ಬೆಂಗಾಲ್ ಪರ ರನ್ ನಿಯಂತ್ರಿಸಿ ವಿಕೆಟ್ ಪಡೆಯುತ್ತಿದ್ದೇನೆ ಮತ್ತು ಫಿಟ್ನೆಸ್ ಸಾಬೀತು ಮಾಡಿದ್ದೇನೆ. ಆದಾಗ್ಯೂ ನನಗೆ ಅವಕಾಶ ಸಿಗದಿದ್ದರೆ ಅದು ನನ್ನ ನಷ್ಟವಲ್ಲ, ಆಯ್ಕೆಗಾರರ ನಿರ್ಧಾರ” ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಯಾವುದೇ ಒತ್ತಡಕ್ಕೆ ಮಣಿಯದೆ, ತಮ್ಮ ಆಟದ ಮೇಲಷ್ಟೇ ಗಮನ ನೆಟ್ಟಿರುವ ಶಮಿ ಅವರ ಈ ಮಾತುಗಳು ಅವರ ಕ್ರೀಡಾ ಮನೋಭಾವ ಹಾಗೂ ಸ್ವಾಭಿಮಾನವನ್ನು ಎತ್ತಿಹಿಡಿದಿವೆ. ಭಾರತ ತಂಡಕ್ಕೆ ಮರಳುವುದು ಆಯ್ಕೆಗಾರರ ಕೈಯಲ್ಲಿದೆಯೇ ಹೊರತು ತಮ್ಮ ನಿಯಂತ್ರಣದಲ್ಲಿಲ್ಲ ಎಂಬುದನ್ನು ಶಮಿ ಈ ಮೂಲಕ ಸ್ಪಷ್ಟವಾಗಿ ತಿಳಿಸಿದ್ದಾರೆ.



