ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋದಿ ಮತ್ತೆ ಪ್ರಧಾನಿಯಾದರೆ ತಲೆ ಬೋಳಿಸುವೆ ಎಂದು ಸವಾಲು ಹಾಕಿದ್ದ ಆಪ್ ನಾಯಕ ಇದೀಗ ಉಲ್ಟಾ ಹೊಡೆದಿದ್ದಾರೆ.
ಆಪ್ ನಾಯಕ ಸೋಮನಾಥ್ ಭಾರ್ತಿ ,ಈ ಚುನಾವಣೆ ಇಂಡಿಯಾ ಒಕ್ಕೂಟದ ಪರವಾಗಿದೆ. ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದಿದ್ದರು. ಇದರ ಜೊತೆಗೆ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವೆ ಎಂದು ಸವಾಲು ಹಾಕಿದ್ದರು. ಇದೀಗ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಮೋದಿ ಸರ್ಕಾರ ರಚನೆಯಾಗುತ್ತಿದ್ದಂತೆ ಸೋಮನಾಥ್ ಭಾರ್ತಿ ಯೂ ಟರ್ನ್ ಹೊಡೆದಿದ್ದಾರೆ.
ತಮ್ಮ ಹೇಳಿಕೆ ಟ್ರೋಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸೋಮನಾಥ್ ಭಾರ್ತಿ, ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದು ಸರ್ಕಾರ ರಚಿಸಿ ಮೋದಿ ಪ್ರಧಾನಿಯಾದರೆ ತಲೆ ಬೋಳಿಸುವುದಾಗಿ ಹೇಳಿದ್ದೇನೆ. ಮೋದಿ ನೇತೃತ್ವದ ಬಿಜೆಪಿ ಏಕಾಂಗಿಯಾಗಿ ಬಹುಮತ ಗಳಿಸಿಲ್ಲ. ಮೋದಿ ಹಾಗೂ ಬಿಜೆಪಿಗೆ ಜನ ಪ್ರಧಾನಿಯಾಗುವಷ್ಟು ಮತ ನೀಡಿಲ್ಲ. ಮೂರನೇ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಆರಿಸಿ ಬಂದರೆ ತಲೆ ಬೋಳಿಸುತ್ತಿದ್ದೆ. ಆದರೆ ಹಾಗಾಗಿಲ್ಲ. ಸದ್ಯ ಎನ್ಡಿಎ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದು ಹೇಳಿದ್ದಾರೆ.
ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಜೆಡಿಯು, ಟಿಡಿಪಿ ಹಾಗೂ ಇತರ ಮೈತ್ರಿ ಪಕ್ಷಗಳ ನೆರವಿನಿಂದ ಮೋದಿ ಪ್ರಧಾನಿಯಾಗಿದ್ದಾರೆ. ಬಿಜೆಪಿ ಹಾಗೂ ಮೋದಿ ಚುನಾವಣೆಗೂ ಮೊದಲು ಬಿಜೆಪಿ ಏಕಾಂಗಿಯಾಗಿ 370ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದಿದ್ದರು. ಇಷ್ಟೇ ಅಲ್ಲ ಎನ್ಡಿಎ ಚಾರ್ ಸೋ ಪಾರ್ ಎಂದಿದ್ದರು. ಆದರೆ ಬಿಜೆಪಿ 240 ಸ್ಥಾನ ಗೆದ್ದರೆ, ಎನ್ಡಿಎ 292 ಸ್ಥಾನಕ್ಕೆ ಸೀಮಿತವಾಗಿದೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.