ಆಪರೇಷನ್ ಕಮಲ ಮಾಡಲ್ಲ, ರಾಜ್ಯ ಸರ್ಕಾರವೇ ಬಿದ್ದು ಹೋಗುತ್ತೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ

ಹೊಸದಿಗಂತ ವರದಿ, ಮೈಸೂರು;

ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಯ ಬಳಿಕ ಪತನವಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಹೇಳಿದರು.

ಸೋಮವಾರ ನಗರದ ಬಿಜೆಪಿ ಕಚೇರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕರ ಆತಂರಿಕ ಕಚ್ಚಾಟದಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಹಾಗಾಗಿ ನಾವು ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ ಎಂದರು. ರಾಜ್ಯ ವಿಧಾನಸಭೆ ಚುನಾವಣೆಗಾಗಿ ಐದು ವರ್ಷಗಳ ಕಾಲ ಕಾಯಬೇಕಾಗಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕವೇ ಯಾವ ಕ್ಷಣದಲ್ಲಾದರೂ ವಿಧಾನಸಭೆ ಚುನಾವಣೆ ನಡೆಯಬಹುದು. ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಸರ್ಕಾರ ಪುಕ್ಸಟ್ಟೆ ಯೋಜನೆಗಳನ್ನು ಜಾರಿ ಮಾಡಿ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಿ, ಅವಮಾನ ಮಾಡಿದೆ. ಜಾರಿಗೊಳಿಸಿರುವ ಫುಕ್ಕಟ್ಟೆ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ, ಬೊಕ್ಕಸವೂ ಖಾಲಿಯಾಗಿದೆ. ಹಣಕಾಸಿನ ಪರಿಸ್ಥಿತಿಯನ್ನೂ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸೆತ್ತಿರುವ ರಾಜ್ಯದ ಜನರು ಆದಷ್ಟು ಬೇಗ ಈ ಸರ್ಕಾರ ತೊಲಗಲಿ ಎಂದು ಬಯಸುತ್ತಿದ್ದಾರೆ. ಹಾಗಾಗಿ ನಾವು ಪಕ್ಷದ ಸಂಘಟನೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನವರೇ ಕೋಮುವಾದಿಗಳು; ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬಡವ, ಶ್ರೀಮಂತ, ಜಾತಿ, ಭೇದ ಭಾವ ಬರಬಾರದು. ನಾವೆಲ್ಲರೂ ಒಂದೇ ಎಂದ ಸಮಾನತೆಯ ಸಮಾಭಾವ ಬರಬೇಕೆಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಸಮವಸ್ತ್ರ ನೀತಿ ಸಂಹಿತೆಯನ್ನು ಜಾರಿಗೆ ತಂದಿತ್ತು. ಹಿಜಾಬ್‌ನ್ನು ನಿಷೇಧಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಜಾಬ್ ನಿಷೇಧದ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಆ ಮೂಲಕ ಶಾಲಾ-ಕಾಲೇಜು ಗಳಲ್ಲಿ ಇವರು ಮುಸ್ಲಿಂಮರು, ಹಿಂದುಗಳು, ಕ್ರೀಶ್ಚಿಯನ್ನರು ಎಂಬ ಜಾತಿ, ಧರ್ಮಗಳ ಬೇಧಭಾವವನ್ನು ಬಿತ್ತಲು ಹೊರಟಿದೆ. ಕಾಂಗ್ರೆಸ್‌ನವರೇ ನಿಜವಾದ ಕೋಮುವಾದಿಗಳು, ಬಿಜೆಪಿಯವರಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!