ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ–ಪಾಕಿಸ್ತಾನ ಶಾಂತಿ ಮಾತುಕತೆಯು ವಿಫಲವಾದರೆ, ಬಹಿರಂಗ ಯುದ್ಧ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.
ಅಫ್ಘಾನಿಸ್ತಾನ ಈ ಸನ್ನಿವೇಶಕ್ಕೆ ಸಿದ್ಧರಾಗಿರಬೇಕು ಮತ್ತು ಗಡಿಯಲ್ಲಿ ಪ್ರಸ್ತುತ ಶಾಂತಿ ಉಳಿಯುವಂತೆ ರಾಜತಾಂತ್ರಿಕ ಕ್ರಮಗಳು ಕೈಗೊಳ್ಳಬೇಕಾಗಿದ್ದು, ಯಾವುದೇ ಸಂವಾದ ವಿಫಲವಾದರೆ ಪಾಕಿಸ್ತಾನಕ್ಕೆ ಹೋರಾಟ ಹೊರತು ಬೇರೆ ಮಾರ್ಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಕ್ಟೋಬರ್ 9 ರಂದು ನಡೆದ ಪಾಕಿಸ್ತಾನ ದಾಳಿ ನಂತರ ಎರಡೂ ದೇಶಗಳು ಗಡಿ ಉಲ್ಲಂಘನೆ ಮತ್ತು ವೈಮಾನಿಕ ದಾಳಿಗಳ ಕುರಿತು ಪರಸ್ಪರ ಆರೋಪ ಮಾಡಿದ್ದೂ, ಐದು ದಿನಗಳ ಗಡಿ ಘರ್ಷಣೆಗಳಲ್ಲಿ ಹಲವು ಸೈನಿಕರು ಮತ್ತು ನಾಗರಿಕರು ಪ್ರಾಣ ಕಳೆದುಕೊಂಡರು. ಉದ್ವಿಗ್ನತೆಯನ್ನು ಗಮನಿಸಿ, ಕತಾರ್ ಮಧ್ಯಸ್ಥಿಕೆ ವಹಿಸಿದ್ದು, ದೋಹಾದಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಸಾಧಿಸಲಾಗಿದೆ.
ಇಸ್ತಾನ್‌ಬುಲ್‌ನಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಭವಿಷ್ಯದ ಹಿಂಸಾಚಾರ ತಡೆ, ಪರಸ್ಪರ ಸರ್ವಭೌಮ ಗೌರವ, ಪಾಕಿಸ್ತಾನದ ಭದ್ರತಾ ಸಮಸ್ಯೆ ಪರಿಹಾರ ಮತ್ತು ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವಂತಹ ಮಹತ್ವದ ವಿಚಾರಗಳ ಮೇಲೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ಅಫ್ಘಾನಿಸ್ತಾನವು ಕುನಾರ್ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಯೊಂದಿಗೆ ಪಾಕಿಸ್ತಾನಕ್ಕೆ ತಾಂತ್ರಿಕವಾಗಿ ಪ್ರಭಾವ ಬೀರುವ ಸಾಧ್ಯತೆಯಿದೆ.

